

ವಿಟ್ಲ: ಅಂತರ್ಜಲಕ್ಕೆ ವಿಶೇಷ ಕೊಡುಗೆಯನ್ನು ನೀಡುವ ಕೆರೆಗಳ ಪುನಶ್ಚೇತನಕ್ಕೆ ಕಾರ್ಯಯೋಜನೆಗಳನ್ನು ಸಿದ್ಧಪಡಿಸಲಾಗುತ್ತದೆ ಹೊರತು ಅದ್ಯಾವುದೂ ಕಾರ್ಯರೂಪಕ್ಕೆ ಬರುತ್ತಿಲ್ಲ. ವಿಟ್ಲ ಕಾಶೀಮಠದ ಸಮೀಪದಲ್ಲಿರುವ ಕೋಟಿ ಕೆರೆಯಲ್ಲಿ ಹೂಳು ತುಂಬಿದ್ದು, ದುರಸ್ತಿಗೆ ಸರ್ಕಾರದ ಅನುದಾನ ಲಭಿಸುತ್ತಿಲ್ಲ. ಸಂಘ-ಸಂಸ್ಥೆಗಳು ಮಾಡುವ ಕಾರ್ಯಕ್ಕೆ ಅಽಕಾರಿ ವರ್ಗ ಕೈಜೋಡಿಸುವ ಕಾರ್ಯವನ್ನೂ ಮಾಡುತ್ತಿಲ್ಲ.
ವಿಟ್ಲ ಅರಮನೆಗೆ ಸಂಬಂಧಪಟ್ಟ ೨೫ ಮೀಟರ್ ಅಗಲದ ೭೫ ಮೀಟರ್ ಉದ್ದದ ಕೆರೆ ಇದಾಗಿದ್ದು, ಗ್ರಾಮೀಣ ಭಾಗದ ಈಜುಪಟುಗಳನ್ನು ಸಿದ್ಧಪಡಿಸುವ ಕೇಂದ್ರ ಎಂದರೆ ತಪ್ಪಾಗಲಾರದು. ಕೆಲವು ವರ್ಷಗಳ ಹಿಂದೆ ರಮಾನಾಥ ವಿಟ್ಲ ಅವರ ಮುಂದಾಳುತ್ವದಲ್ಲಿ ಜಲಾನಯನ ಇಲಾಖೆಯ ಕೆರೆಗಳ ಪುನಶ್ಚೇತನ ಕಾರ್ಯದಡಿಯಲ್ಲಿ ೨.೫ ಲಕ್ಷದಲ್ಲಿ ಹೂಳೆತ್ತುವ ಕಾರ್ಯ ಮಾಡಲಾಗಿತ್ತು. ಆ ಬಳಿಕ ಸರ್ಕಾದ ಅನುದಾನದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯವನ್ನು ಮಾಡಲಾಗಿತ್ತು.
ಸ್ಥಳೀಯ ಸಂಘ-ಸಂಸ್ಥೆಗಳು ಪ್ರತಿ ವರ್ಷ ಶ್ರಮಸೇವೆಯನ್ನು ನಡೆಸಿಕೊಂಡು ಬರುತ್ತಿರುವ ಕಾರಣದಿಂದ ತಕ್ಕಮಟ್ಟಿನಲ್ಲಿ ಕೆರೆ ಉಳಿದುಕೊಂಡಿದೆ. ಇತಿಹಾಸ ಪ್ರಸಿದ್ಧ ಕೋಟಿಕೆರೆಗೆ ಮತ್ತೆ ಕಾಯಕಲ್ಪ ಅಗತ್ಯ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಕೆರೆಯಲ್ಲಿ ಹೂಳು ತುಂಬಿದ್ದು, ಅಡಿಭಾಗದಲ್ಲಿ ಹಾವಸೆ ಜಾಸ್ತಿಯಾಗಿದೆ. ಕೆರೆಯನ್ನು ಸ್ವಚ್ಛಗೊಳಿಸದೆ ಇದ್ದಲ್ಲಿ ಮಳೆಗಾಲದಲ್ಲಿ ವಿಟ್ಲ ಪರಿಸರದ ಮಕ್ಕಳಿಗೆ ಈಜಾಡಲು ವ್ಯವಸ್ಥೆಯೇ ಇಲ್ಲದಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕೆಂದು ಈಜುಪಟುಗಳ ಆಗ್ರಹವಾಗಿದೆ.
ಕೊಳವೆಬಾವಿಗಳನ್ನು ಸುಲಭವಾಗಿ ಯಂತ್ರಗಳ ಮೂಲಕ ನಿರ್ಮಾಣ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ಕೆರೆಗಳ ಕಡೆಗೆ ಜನರು ಹೆಚ್ಚು ಒಲವು ತೋರುತ್ತಿಲ್ಲ. ಇದರಿಂದ ಭೂಮಿಯ ಮೇಲ್ಭಾಗದ ನೀರಿನ ಬದಲಾಗಿ ಗರ್ಭದಿಂದ ನೀರು ಹೀರುವ ಕೆಲಸವಾಗುತ್ತಿದೆ. ಈ ಮೂಲಕ ಭೂಮಿಯ ತಾಪಮಾನದ ಹೆಚ್ಚಳವಾಗುತ್ತಿದೆ ಎಂಬ ಆಭಿಪ್ರಾಯವೂ ಕೇಳಿ ಬರುತ್ತಿದೆ. ಸರ್ಕಾರಗಳು ದುಂದುವೆಚ್ಚ ಮಾಡುವ ಹಣದ ಒಂದು ಭಾಗವನ್ನು ಇಂತಹ ಕೆರೆಗಳ ಪುನಶ್ಚೇತನಕ್ಕೆ ಮೀಸಲಿಡುವ ಕಾರ್ಯವಾಗಬೇಕೆಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ಈಜುಪಟುಗಳ ತರಬೇತಿಯ ಕೆರೆ
ವಿಟ್ಲದ ಈಜುಪಟುಗಳಿಗೆ ಹಾಗೂ ಈಜು ಕಲಿಯುವವರಿಗೆ ಕೋಟಿಕೆರೆಯೇ ಅನಿವಾರ್ಯವಾಗಿದೆ. ಕೆರೆಯಲ್ಲಿ ಈಜು ಕಲಿತು ರಾಜ್ಯ ಮಟ್ಟದ, ರಾಷ್ಟ್ರಮಟ್ಟದ ಈಜು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನ ಪಡೆದಿದ್ದಾರೆ. ಸರ್ಕಾರಿ ನೌಕರರ ಸಂಘದ ವತಿಯಿಂದ ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಸತತ ಹನ್ನೆರಡು ಬಾರಿ ಚಾಂಪಿಯನ್ ಆಗಿ ಮೂಡಿಬಂದಿರುವ ಕಾಶಿಮಠ ಈಶ್ವರ ಭಟ್ ಈ ಕೆರೆಯಲ್ಲಿ ಈಜು ಕಲಿತವರು. ಅನೇಕ ಮಂದಿ ಈಜು ತರಬೇತುದಾರರು ಪ್ರತಿವರ್ಷ ಮಳೆಗಾಲದಲ್ಲಿ ಈಜು ತರಬೇತು ನೀಡುತ್ತಿದ್ದಾರೆ. ಬೆಳಗ್ಗಿನ ವ್ಯಾಯಾಮಕ್ಕಾಗಿ ಅನೇಕ ಮಂದಿ ಬೆಳಗ್ಗೆ ಈ ಕೋಟಿಕೆರೆಯನ್ನೇ ಆಶ್ರಯಿಸಿದ್ದಾರೆ.
ತಡೆಗೋಡೆ ದುರಸ್ತಿ
೨೦೧೩ರಲ್ಲಿ ಈಜುಕೊಳಕ್ಕೆ ಸುಮಾರು ೧೦ ಲಕ್ಷಕ್ಕೂ ಅಽಕ ಮೊತ್ತದ ಅನುದಾನದಲ್ಲಿ ಕಾಯಕಲ್ಪ ನೀಡಲಾಗಿತ್ತು. ಸರ್ಕಾರದ ಯೋಜನೆಯಾಗಿದ್ದರಿಂದ ತಡೆಗೋಡೆಗೆ ವಿನೋಗವಾಗಿದ್ದ ಹಣ ಕಡಿಮೆಯಾಗಿ ಅಲ್ಲಲ್ಲಿ ಕುಸಿಯಲಾರಂಭಿಸಿತ್ತು. ಆ ಬಳಿಕ ಈಜುಪಟುಗಳಿಗೆ ಸಮಸ್ಯೆಯಾಗುತ್ತದೆ ಎಂಬ ಕಾರಣದಿಂದ ಸ್ಥಳೀಯ ಯುವಕರು ಶ್ರಮದಾನದಲ್ಲಿ ನೆರವೇರಿಸಿದ ಕಾಮಗಾರಿ ಗಟ್ಟಿಯಾಗಿತ್ತು.
ಸಂಘ-ಸಂಸ್ಥೆಗಳಿಂದ ಅಭಿವೃದ್ಧಿ
೨೦೧೬ರಲ್ಲಿ ತಡೆಗೋಡೆ ಕುಸಿದಾಗ ವಿಟ್ಲ ಜೇಸಿಐ, ಕಾಶಿಮಠ ಶ್ರೀ ಕಾಶಿ ಯುವಕ ಮಂಡಲ, ವಿಟ್ಲ ಸ್ವಿಮ್ಮಿಂಗ್ ಕ್ಲಬ್‌ಗಳು ಜತೆಗೂಡಿ ಸರ್ಕಾರದ ಅನುದಾನಕ್ಕೆ ಕೈಚಾಚದೆ ತಾವೇ ಅಭಿವೃದ್ಧಿಪಡಿಸಲು ನಿರ್ಧಾರ ಮಾಡಿದ್ದರು. ಆಗಿನ ವಿಟ್ಲ ಜೇಸಿಐ ಅಧ್ಯಕ್ಷ ಬಾಬು ಕೆ.ವಿ. ಅವರು ೧.೨೦ ಲಕ್ಷ ರೂ. ವೆಚ್ಚದಲ್ಲಿ ಕೆರೆಗೆ ಪುನಶ್ಚೇತನ ಮಾಡಿದ್ದರು. ಆ ಬಳಿಕ ಸಣ್ಣಪುಟ್ಟ ಕೆಲಸಗಳನ್ನು ನಿರ್ವಹಿಸಿ ಕೆರೆಯಲ್ಲಿ ಈಜುವುದಕ್ಕೆ ಸಮಸ್ಯೆಯಿಲ್ಲದಂತೆ ನೋಡಿಕೊಳ್ಳಲಾಗಿತ್ತು.
ಈಜುಪಟುಗಳನ್ನು ತಯಾರು ಮಾಡುವ ಇತಿಹಾಸ ಪ್ರಸಿದ್ಧ ಕೆರೆಯ ವೈಭವ ಮುಂದಿನ ಪೀಳಿಗೆಗೂ ಸಿಗಬೇಕು. ಕೋಟಿಕೆರೆಯ ಕುಸಿದ ಜಾಗವನ್ನು ದುರಸ್ತಿ ಮಾಡುವ ಬಗ್ಗೆ ಯೋಜನೆಯನ್ನು ಸ್ಥಳೀಯವಾಗಿ ಹಾಕಿಕೊಳ್ಳಲಾಗಿದೆ. ಸುಮಾರು ೧ ಲಕ್ಷದಷ್ಟು ವೆಚ್ಚದ ಅನಿವಾರ್ಯತೆ ಇದ್ದು, ಮಳೆ ಪ್ರಾರಂಭವಾಗಿ ನೀರು ಹೆಚ್ಚಾಗುತ್ತಿದೆಯಾದರೂ ಕಾಮಗಾರಿಯ ಪ್ರಯತ್ನದಲ್ಲಿದ್ದೇವೆ.
| ಬಾಬು ಕೆ.ವಿ.
ಅಧ್ಯಕ್ಷರು, ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘ