

ಗದಗ: ಮಹಿಳೆಯರ ಮತ್ತು ಯುವತಿಯರ ಸಬಲೀಕರಣಕ್ಕಾಗಿ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ ಸದುಪಯೋಗ ಪಡಿಸಿಕೊಂಡು ಸಬಲರಾಗಬೇಕು ಎಂದು ಗದಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೆಶಕ ವಿಠ್ಠಲ ಜಾಬಗೌಡರ ಕರೆ ನೀಡಿದರು.
ಗದಗ ನಗರದ ತೋಂಟದಾರ್ಯ ಮಠದ ರಸ್ತೆಯ ಗದಗ ಸ್ಪೋಟ್ಸ್ ಶೂಟಿಂಗ್ ಅಕ್ಯಾಡಮಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ,ಗದಗ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಗದಗ ಮತ್ತು ಗದಗ ಸ್ಪೋಟ್ಸ್ ಶೂಟಿಂಗ್ ಅಕ್ಯಾಡೆಮಿ, ಗದಗ ಇವರ ಸಹಯೋಗದಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ 19 ವರ್ಷದೊಳಗಿನ ಯುವತಿಯರಿಗಾಗಿ ಮತ್ತು ಮಹಿಳೆಯರಿಗಾಗಿ ಉಚಿತವಾಗಿ ಇಂದು 10 ಮೀಟರ್ ಏರ್ ರೈಫಲ್ ಶೂಟಿಂಗ್ ತರಬೇತಿ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯುವತಿಯರು ಪಠ್ಯದ ಜೊತೆಗೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ. ತಮಗೆ ಯಾವ ಕ್ರೀಡೆಯಲ್ಲಿ ಆಸಕ್ತಿ ಇದೆ ಆ ಕ್ರೀಡೆಯಲ್ಲಿ ಕೌಶಲ್ಯಗಳ ಜೊತೆಗೆ ಉತ್ತಮ ತರಬೇತಿದಾರರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ರಾಷ್ಟ್ರ, ಅಂತರ್ ರಾಷ್ಟ್ರ ಮಟ್ಟ್ದಲ್ಲಿ ಭಾಗವಹಿಸಿ ಉತ್ತಮ ಕ್ರೀಡಾ ಪಟುಗಳಾಗಿ ಗದಗ ಜಿಲ್ಲೆಯ ಕೀರ್ತಿ ತರಬೇಕೆಂದರು. ಏರ್ ರೈಫಲ್ ಶೂಟಿಂಗ್ ತರಬೇತಿದಾರ ಬಸವರಾಜ ಹೊಂಬಾಳಿ ಪ್ರಾಸ್ಥಾವಿಕವಾಗಿ ಮಾತನಾಡಿ ಈ ಭಾಗದ ಕ್ರೀಡಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೂಟಿಂಗ್ ನಲ್ಲಿ ಉತ್ತಮ ತರಬೇತಿ ಮಾರ್ಗದರ್ಶನ ನೀಡಿ ಓಲಂಪಿಕ್ ನಲ್ಲಿ ಭಾಗವಹಿಸುವ ಮೂಲಕ ಪದಕ ಗಳಿಸಿ ಗದಗ ಜಿಲ್ಲೆಯ ಕೀರ್ತಿ ತರುವ ಮಹಾದಾಸೆ ನನ್ನದಾಗಿದೆ ಎಂದರು. ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಪಾಲಕರು ಇಂತಹ ಕ್ರೀಡೆಗಳಿಗೆ ಸೇರಿಸುವ ಮೂಲಕ ಉತ್ತಮ ಕ್ರೀಡಾಪಟುಗಳಾದರೆ ಅವರ ಬದುಕು ಬಂಗಾರ ವಾಗಲಿದೆ ಎಂದರು. ಈ ಕಾರ್ಯಕ್ರಮದಲ್ಲಿ ಗದಗ ಸ್ಪೋಟ್ಸ್ ಶೂಟಿಂಗ್ ಅಕ್ಯಾಡೆಮಿ ಅಧ್ಯಕ್ಷ ಮುರಘರಾಜೇಂದ್ರ ಬಡ್ನಿ, ವರಲಕ್ಷ್ಮೀ ಹೊಂಬಾಳಿ, ರಾಷ್ಟ್ರಮಟ್ಟದ ಏರ್ ರೈಫಲ್ ಶೂಟರ್ ಪ್ರತಿಭಾ ಬಡ್ನಿ ಮುಂತಾದವರಿದ್ದರು. ವೈ.ಕೆ.ಚೌಡಾಪೂರ ಸ್ವಾಗತಿಸಿ ನಿರೂಪಿಸಿದರು, ಮಂಜುನಾಥ ಭಾಗಡೆ ವಂದಿಸಿದರು.