

ವಿಟ್ಲ: ವಿಟ್ಲ ಪೊಲೀಸ್ ಠಾಣೆಯ ಓರ್ವ ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಠಾಣೆಯ 13 ಸಿಬ್ಬಂದಿ ಸೇರಿದಂತೆ 20 ಜನರನ್ನು ಭಾನುವಾರ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವೇದಾವತಿ ಅವರ ತಂಡ ಪ್ರಾಥಮಿಕ ಸಂಪರ್ಕಕ್ಕೆ ಬಂದ ವಿಟ್ಲ ಉಪನಿರೀಕ್ಷಕರು ಸೇರಿ 13 ಸಿಬ್ಬಂದಿಯನ್ನು ಹಾಗೂ ನೇರ ಸಂಪರ್ಕಕ್ಕೆ ಬಂದ 7 ಮಂದಿ ಹೊರಗಿನವರನ್ನು ಕ್ವಾರಂಟೈನ್ ಮಾಡಿದರು. ಕರ್ತವ್ಯಗಳಿಗೆ ಬೇರೆ ಠಾಣೆಗಳಿಂದ ಸಿಬ್ಬಂದಿಗಳನ್ನು ಕರೆಸಿಕೊಳ್ಳಲಾಗಿದೆ.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ ನೇತೃತ್ವದಲ್ಲಿ ವಿಟ್ಲ ಠಾಣೆಯನ್ನು ಸ್ಯಾನಿಟೈಸರ್ ಮೂಲಕ ಸ್ವಚ್ಛಗೊಳಿಸಲಾಯಿತು. 48 ಗಂಟೆ ಬಳಿಕ ಮತ್ತೆ ಕಾರ್ಯಾರಂಭ ಮಾಡಲಾಗುವುದು.
ವಿಟ್ಲ ಸಿಪಿಸಿಆರ್‌ಐನಲ್ಲಿರುವ ಅತಿಥಿ ಗೃಹ, ಪೊಲೀಸ್ ವಸತಿ ಸಮುಚ್ಚಯ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೊಲೀಸರನ್ನು ಹಾಗೂ ನೇರ ಸಂಪರ್ಕಕ್ಕೆ ಬಂದವರನ್ನು ನಿಗಾದಲ್ಲಿ ಇಡಲಾಗಿದೆ. ಹೊಸ ಮಾರ್ಗಸೂಚಿಯಂತೆ ಸೀಲ್‌ಡೌನ್ ಕಾರ್ಯ ನಡೆಯುವುದಿಲ್ಲ.
ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಸೂಚನೆ ಮೇರೆಗೆ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ಗ್ರಾಮ ಕರಣಿಕ ಪ್ರಕಾಶ್, ಸಿಬ್ಬಂದಿ ಚಂದ್ರಶೇಖರ ವರ್ಮ ಅವರ ತಂಡ ಕಾರ್ಯಾಚರಣೆ ನಡೆಸಿತು.
ತಾಪಂ ಕರ್ತವ್ಯಲೋಪದಿಂದ ಎಡವಟ್ಟು
ಮೇ 15ರಂದು ಬೆಳಗ್ಗಿನ ಜಾವ ವಿಟ್ಲಕ್ಕೆ ಮಹಾರಾಷ್ಟ್ರದ ರಾಯಗಢದಿಂದ ಬಂದ ವ್ಯಕ್ತಿಯನ್ನು ನೇರ ದಿಗ್ಭಂಧನಗೊಳಿಸುವಲ್ಲಿ ಕರ್ತವ್ಯಲೋಪ ಆಗಿದ್ದರಿಂದ ರೋಗ ಹರಡಿದೆ. ದಿಗ್ಬಂಧನ ಕೇಂದ್ರದ ಜವಾಬ್ದಾರಿ ಹೊಂದಿರುವ ತಾಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸೂಕ್ತ ವ್ಯವಸ್ಥೆ ಕಲ್ಪಿಸಿರಲಿಲ್ಲ. ಕೇಂದ್ರದ ಬೀಗ ಹಾಕಿದ್ದೂ ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳ ದೂರವಾಣಿ ಕರೆ ಸ್ವೀಕರಿಸದೆ ಕರ್ತವ್ಯ ಲೋಪ ಎಸಗಿದ್ದರು. ಅನಿವಾರ್ಯ ಸ್ಥಿತಿಯಲ್ಲಿ ಆ ವ್ಯಕ್ತಿ ಠಾಣೆಯ ಮೆಟ್ಟಿಲು ಏರಿದ್ದು, ಬಳಿಕ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. 18ರಂದು ವ್ಯಕ್ತಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ವಿಟ್ಲ ಠಾಣೆಯ ಇಬ್ಬರು ಸಿಬ್ಬಂದಿಯನ್ನು ಗೃಹ ಬಂಧನಕ್ಕೆ ಒಳಪಡಿಸಲಾಗಿತ್ತು. ಹೊರಗಿನಿಂದ ಬರುವವರ ಮೇಲೆ ತಾಲೂಕು ವ್ಯವಸ್ಥೆ ಸೂಕ್ತ ನಿಗಾ ಇಡದೆ ಬೇಜವಾಬ್ದಾರಿ ತೋರಿಸಿರುವುದು ಎಡವಟ್ಟಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ನೇರ ಸಂಪರ್ಕವಿಲ್ಲದಿದ್ದರೂ ಸೋಂಕು
ಮಹಾರಾಷ್ಟ್ರದಿಂದ ಆಗಮಿಸಿದ ವ್ಯಕ್ತಿಯ ಮಾಹಿತಿ, ದಾಖಲೆಗಳನ್ನು ಪರಿಶೀಲನೆ ನಡೆಸಿದ ಪೊಲೀಸ್ ಸಿಬ್ಬಂದಿಯ ಗಂಟಲು ದ್ರವ ತಪಾಸಣೆ ನೆಗೆಟಿವ್ ಬಂದಿದೆ. ಆದರೆ ಆ ದಿನ ಕರ್ತವ್ಯದಲ್ಲಿದ್ದು, ಸೋಂಕಿತನೊಂದಿಗೆ ನೇರ ಸಂಪರ್ಕಕ್ಕೆ ಬಾರದ ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಸಾಲೆತ್ತೂರು ಕಸಾಯಿಖಾನೆ ದಾಳಿ ಸಂದರ್ಭ ಕರೊನಾ ಪಾಸಿಟಿವ್ ಬಂದ ಪೊಲೀಸ್ ಸಿಬ್ಬಂದಿಯೂ ಭಾಗವಹಿಸಿದ ಹಿನ್ನೆಲೆಯಲ್ಲಿ ಪೊಲೀಸರಲ್ಲಿ ಆತಂಕ ಸೃಷ್ಟಿಯಾಗಿದೆ.