ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಥ್ಲೆಟಿಕ್‌ಗೆ ಮೈಸೂರಿನಲ್ಲಿ ಚಾಲನೆ

vtu
Published on

ಮೈಸೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಗರದ ಚಾಮುಂಡಿವಿಹಾರ ಸ್ಟೇಡಿಯಂನಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿರುವ 25ನೇ ಅಂತರ ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಬುಧವಾರ ಚಾಲನೆ ದೊರೆಯಿತು. ಕ್ರೀಡಾಕೂಟದಲ್ಲಿ ರಾಜ್ಯದ 138 ತಾಂತ್ರಿಕ ಕಾಲೇಜುಗಳ 1650 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.

10 ಸಾವಿರ ಮೀಟರ್ ಓಟ ಯುವಕರ ವಿಭಾಗದಲ್ಲಿ ಸುಳ್ಯದ ಕೆವಿಜಿಸಿಇ ಕಾಲೇಜಿನ ಎ.ಎಂ. ತಿಶನ್ (ಪ್ರಥಮ), ಮಂಗಳೂರು ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎ.ಆರ್. ಅಕ್ಷಯ್ (ದ್ವಿತೀಯ), ಬೆಂಗಳೂರಿನ ಬಿಎನ್‌ಎಂಐಟಿ ಕಾಲೇಜಿನ ಲತೀಶ್ ಜಿ.ಗೌಡ (ತೃತೀಯ), ಯುವತಿಯರ ವಿಭಾಗದಲ್ಲಿ ಸುಳ್ಯದ ಕೆವಿಜಿಸಿಇ ಕಾಲೇಜಿನ ಎಂ. ಶ್ರೇಯಾ (ಪ್ರಥಮ), ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಸಿ.ಎಸ್. ವಿದ್ಯಾ (ದ್ವಿತೀಯ), ಬೆಂಗಳೂರು ಯಲಹಂಕದ ಇಡಬ್ಲೂೃಸಿಇ ಕಾಲೇಜಿನ ಸಿ. ಸಂಜಯಾ (ತೃತೀಯ) ಸ್ಥಾನ ಪಡೆದರು.

ಎತ್ತರ ಜಿಗಿತ ಯುವಕರ ವಿಭಾಗದಲ್ಲಿ ಗದಗದ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನ ಸುನಿಲ್ ಬಸವರಾಜ್ ಮೇಟಿ (ಪ್ರಥಮ), ಬೆಂಗಳೂರಿನ ಬೇರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೊಹಮ್ಮದ್ ಅವೇಜ್ (ದ್ವಿತೀಯ), ಬೆಂಗಳೂರಿನ ದಯಾನಂದ ಸಾಗರ್ ಇನ್‌ಸ್ಟಿಟ್ಯೂಟ್‌ನ ಎಸ್. ಆದಿತ್ಯ (ತೃತೀಯ), ಯುವತಿಯರ ವಿಭಾಗದಲ್ಲಿ ಬೆಂಗಳೂರು ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ದೀಪ್ತಾ ಬಾಲರಾಜು (ಪ್ರಥಮ), ಮಂಗಳೂರಿನ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಕೆ. ಪವಿತ್ರಾ ಭಟ್ (ದ್ವಿತೀಯ), ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಜೆ.ಎಸ್. ಪಲ್ಲವಿ (ತೃತೀಯ) ಬಹುಮಾನ ಪಡೆದರು.

ಕ್ರೀಡಾಕೂಟಕ್ಕೆ ಚಾಲನೆ: ಅರ್ಜುನ ಪ್ರಶಸ್ತಿ ವಿಜೇತ ಮಾಜಿ ಅಂತಾರಾಷ್ಟ್ರೀಯ ಅಥ್ಲೆಟ್ ಅಶ್ವಿನಿ ನಾಚಪ್ಪ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕೇಂದ್ರ ಸರ್ಕಾರ ಕ್ರೀಡೆಗೆ ಹೆಚ್ಚಿನ ಉತ್ತೇನ ನೀಡುತ್ತಿದ್ದು, ಈ ಕಾರಣಕ್ಕೆ ದೇಶದಲ್ಲಿ ಕ್ರೀಡಾಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರುವ ಅವಕಾಶಗಳು ವಿದ್ಯಾರ್ಥಿಗಳಿ ಇದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್, ಕುಲಸಚಿವ ಪ್ರೊ.ಬಿ.ಇ. ರಂಗಸ್ವಾಮಿ, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಶೈಕ್ಷಣಿಕ ಸಮಿತಿ ಸದಸ್ಯರಾದ ಶಿವಕುಮಾರ್, ಕೃಷ್ಣೇಗೌಡ, ದಿಲೀಪ್ ಕೃಷ್ಣ, ಸುನಿಲ್‌ರಾಜ್, ಗೋವಿಂದೇಗೌಡ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net