ವಿಶ್ವ ಕಂಡ ಶ್ರೇಷ್ಠ ಇಂಜಿನಿಯರ್ ವಿಶ್ವೇಶ್ವರಯ್ಯ

17 SRT 1
Published on

ಶಿರಹಟ್ಟಿ: ಸಾಮಾನ್ಯ ಕುಟುಂಬದಲ್ಲಿ ಜನಿಸಿ ಆಗಾಧ ಬುದ್ಧಿಶಕ್ತಿಯಿಂದ ತಾಂತ್ರಿಕ ಕ್ಷೇತ್ರದಲ್ಲಿ ಸಾಧನೆಗೈಯುವ ಮೂಲಕ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದ ಸರ್.ಎಂ. ವಿಶ್ವೇಶ್ವರಯ್ಯ ವಿಶ್ವ ಕಂಡ ಶ್ರೇಷ್ಠ ಇಂಜಿಯರ್ ಎಂದು ಉಪನ್ಯಾಸಕಿ ರಾಜೇಶ್ವರಿ ಕಪ್ಪತ್ತನವರ ಹೇಳಿದರು.

ಕಸಾಪ ತಾಲೂಕು ಘಟಕದಿಂದ ಪಟ್ಟಣದ ಎಫ್.ಬಿ. ಪೂಜಾರ ಸರ್ಕಾರಿ ಪದವಿ ಪೂರ್ವ ಕಾಲೇಜನಲ್ಲಿ ಶುಕ್ರವಾರ ಏರ್ಪಡಿಸಿದ್ದ ಎಂಜಿನಿಯರ್ಸ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಡು ಕಂಡ ಮೇರು ವ್ಯಕ್ತಿತ್ವದ ಧೀಮಂತ ನಾಯಕ ಸರ್.ಎಂ. ವಿಶ್ವೇಶ್ವರಯ್ಯ. ಇಂಜಿನಿಯರ್, ದಿವಾನ್ ಹಾಗೂ ಮೈಸೂರು ಸಂಸ್ಥಾನದ ಶ್ರೇಷ್ಠ ಆಡಳಿತಗಾರರಾಗಿ ರಾಜ್ಯ, ದೇಶಕ್ಕೆ ನೀಡಿದ ಕೊಡುಗೆ ಸದಾ ಸ್ಮರಣೀಯ. ಸ್ವಾತಂತ್ರೃ ಪೂರ್ವದಲ್ಲಿಯೇ ಬ್ರಿಟಿಷರ ಪ್ರಶಂಸೆಗೆ ಪಾತ್ರರಾಗಿ ಅನೇಕ ಬಿರುದು ಸನ್ಮಾನಗಳಿಗೆ ಅರ್ಹರಾಗಿದ್ದರು. ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಂಬಾಡಿ ಡ್ಯಾಂನ ನಿರ್ಮಾಣದಲ್ಲಿ ತೋರಿದ ಕ್ರಿಯಾಶೀಲತೆ, ಪ್ರಾಮಾಣಿಕತೆ, ಬದ್ಧತೆಯಿಂದ ಪೂಜನೀಯ ಸ್ಥಾನದಲ್ಲಿಟ್ಟು ಗೌರವಿಸುವಂತಾಗಿದೆ ಎಂದರು.

ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಸ್.ಬಿ. ಹೊಸೂರ ಮಾತನಾಡಿ, ವಿಶ್ವೇಶ್ವರಯ್ಯ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು. ಪ್ರಾಚಾರ್ಯ ಬಿ.ಜಿ. ಗಿರಿತಮ್ಮಣ್ಣವರ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಂ. ದೇವಗಿರಿ, ಸತೀಶ ದೇಶಪಾಂಡೆ, ಎಚ್.ಎಂ. ಪಲ್ಲೇದ, ಎ.ಬಿ. ಹರ್ತಿ, ಚಂದ್ರು ಕದಡಿ, ಎಚ್.ಎಂ.ಬೆನಹಾಳ ಇದ್ದರು. ಶಿಕ್ಷಕ ವಾಸುದೇವ ಕಲಾಲ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net