

ಮೈಸೂರು: ಪ್ರತಿಯೊಬ್ಬರನ್ನು ಗೌರವಿಸುವ ಗುಣವನ್ನು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಹೊಂದಿದ್ದರು ಎಂದು ಲೇಖಕ ಎಚ್.ಎಸ್. ಶ್ರೀನಾಥ್ ಹೇಳಿದರು.
ನಗರದ ಇಂಜಿನಿಯರ್‌ಗಳ ಸಂಸ್ಥೆ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಇಂಜಿನಿಯರ್‌ಗಳ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಬಾಲವೃದ್ಧರಾದಿಯಾಗಿ ಎಲ್ಲರನ್ನು ಅವರು ಗೌರವದಿಂದ ಕಾಣುತ್ತಿದ್ದರು. ಅದೇ ರೀತಿ ಅವರು ಗೌರವವನ್ನು ಬಯಸುತ್ತಿದ್ದರು. ಒಮ್ಮೆ ಮೈಸೂರು ದಸರಾ ದರ್ಬಾರ್‌ಗೆ ವಿಶ್ವೇಶ್ವರಯ್ಯ ಅವರಿಗೆ ಆಹ್ವಾನ ದೊರೆತಿತ್ತು. ದರ್ಬಾರ್‌ಗೆ ತೆರಳಿದ್ದ ಸಂದರ್ಭ ಯುರೋಪಿಯನ್ ಅಧಿಕಾರಿಗಳು ಕುರ್ಚಿಯಲ್ಲಿ, ಭಾರತೀಯ ಅಧಿಕಾರಿಗಳು ನೆಲದಲ್ಲಿ ಕುಳಿತಿರುವುದು ಕಂಡು ಬಂತು. ನಂತರ ಮುಂದಿನ ವರ್ಷ ಅವರಿಗೆ ದಸರಾ ದರ್ಬಾರ್‌ಗೆ ಆಹ್ವಾನ ದೊರೆತರೂ ಅವರು ಪಾಲ್ಗೊಳ್ಳಲಿಲ್ಲ. ಈ ವಿಚಾರ ಅರಿತು ಮೈಸೂರು ಮಹಾರಾಜರು ಭಾರತೀಯ ಅಧಿಕಾರಿಗಳಿಗೂ ಕುರ್ಚಿಯ ವ್ಯವಸ್ಥೆ ಮಾಡಿದರು ಎಂದು ಹೇಳಿದರು.
ವಿಶ್ವೇಶ್ವರಯ್ಯ ದೂರದೃಷ್ಟಿಯ ವ್ಯಕ್ತಿತ್ವ ಹೊಂದಿದ್ದರು. ಅವರ ದೂರದೃಷ್ಟಿಯ ಫಲದಿಂದ ದೇಶ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ದೇಶದ ಹಲವಾರು ಭಾಗಗಳಲ್ಲಿ ಅವರು ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಅವರು ಕೇವಲ ಒಬ್ಬ ಇಂಜಿನಿಯರ್ ಮಾತ್ರ ಆಗಿರಲಿಲ್ಲ, ಉತ್ತಮ ಆಡಳಿತಗಾರ ಕೂಡ ಆಗಿದ್ದರು ಎಂದರು.
ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪ್ರಭಾಕರ, ಮಾಜಿ ಅಧ್ಯಕ್ಷ ಎ.ಎಸ್. ಸತೀಶ್, ಕಾರ್ಯದರ್ಶಿ ಎಚ್.ಎಸ್. ಸುರೇಶ್ ಬಾಬು ಹಾಗೂ ಇತರರು ಇದ್ದರು.