ವಿಶ್ವೇಶ್ವರಯ್ಯ, ಬಾಳೇಕುಂದ್ರಿ ನೀರಾವರಿ ಕ್ಷೇತ್ರದ ದಿಗ್ಗಜರು

18 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸರ್​.ಎಂ. ವಿಶ್ವೇಶ್ವರಯ್ಯ ಹಾಗೂ ಎಸ್​.ಜಿ. ಬಾಳೇಕುಂದ್ರಿ ಇಬ್ಬರೂ ಆಧುನಿಕ ಸಮೃದ್ಧ ಕರ್ನಾಟಕ ಕಟ್ಟುವ ಕನಸು ಕಂಡವರು ಎಂದು ಲೋಕೋಪಯೋಗಿ ಇಲಾಖೆ ವಿಶ್ರಾಂತ ಮುಖ್ಯ ಅಭಿಯಂತರ ಕೃಷ್ಣಾಜಿ ಚವ್ಹಾಣ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಎಸ್​.ಜಿ. ಬಾಳೆಕುಂದ್ರಿ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಎಸ್​. ಜಿ.ಬಾಳೇಕುಂದ್ರಿ ಮತ್ತು ಸರ್​.ಎಂ. ವಿಶ್ವೇಶ್ವರಯ್ಯನವರ ಸ್ಮರಣೆ ಹಾಗೂ ಇಂಜಿನಿಯರ್​ ದಿನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಶ್ವೇಶ್ವರಯ್ಯ ಹಾಗೂ ಬಾಳೇಕುಂದ್ರಿ ನೀರಾವರಿ ಕ್ಷೇತ್ರದ ದಿಗ್ಗಜರು. ಇವರ ವಿನ್ಯಾಸದ ಅವಿಷ್ಕಾರ ಹಾಗೂ ಆಣೆಕಟ್ಟು ನಿರ್ಮಾಣ ಅದ್ಭುತ. ಬಾಳೇಕುಂದ್ರಿ ಅವರು ಕೃಷ್ಣೆ, ಮಲಪ್ರಭ ಹಾಗೂ ಘಟಪ್ರಭಾ ನೀರಾವರಿ ಯೋಜನೆ ನಿರ್ಮಾಣದ ರೂವಾರಿ. ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ ಸವಾಲಿನ ಪ್ರಶ್ನೆಯಾಗಿದ್ದಾಗ ಸರ್ಕಾರದ ತಾಂತ್ರಿಕ ಸಲಹಾ ಸಮಿತಿ ಅನುಮತಿ ಪಡೆದು ಎಡದಂಡೆ ಕಾಲುವೆ ನಿರ್ಮಿಸಿ ರಾಮದುರ್ಗ ಹಾಗೂ ಬದಾಮಿ ತಾಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದರು. ಇವರ ಸಾಧನೆ ಈಗಿನ ಎಲ್ಲ ಅಭಿಯಂತರರಿಗೆ ಸ್ಫೂರ್ತಿ ಎಂದರು.
ವಾಲ್ಮಿ ಸಂಸ್ಥೆ ಅಧೀಕ್ಷಕ ಅಭಿಯಂತರ ಬಸವರಾಜ ಬಂಡಿವಡ್ಡರ್​ ಮಾತನಾಡಿದರು. ಇಂಜಿನಿಯರ್​ಗಳಾದ ಕೃಷ್ಣಾಜಿ ಚವ್ಹಾಣ, ಬಸವರಾಜ ಬಂಡಿವಡ್ಡರ, ಶ್ರೀಶೈಲಗೌಡ ಕಮತರ ಅವರನ್ನು ಸನ್ಮಾನಿಸಲಾಯಿತು. ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net