ವಿಶ್ವಕರ್ಮ ಮಹಿಳಾ ಸಮಾವೇಶ ಡಿ. 29ರಂದು

16 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ವತಿಯಿಂದ ಡಿ. 29ರಂದು ನಗರದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬೆಳಗ್ಗೆ 10 ಗಂಟೆಗೆ ವಿಶ್ವಕರ್ಮ ಮಹಿಳಾ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಬಡಿಗೇರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​, ಪಾಲಿಕೆ ಮೇಯರ್​ ರಾಮಪ್ಪ ಬಡಿಗೇರ ಸೇರಿ ಇತರರು ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಶ್ವಕರ್ಮ ಸಮಾಜದ ಮಹಿಳೆಯರನ್ನು ಸನ್ಮಾನಿಸಲಾಗುವುದು. ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಂಘದ ರಾಜ್ಯಾಧ್ಯಕ್ಷ ಕನ್ನಡ ಸೋಮು ಮಾತನಾಡಿ, ಹಿಂದುಳಿದ ವರ್ಗಗಳ ಶೇ. 15ರಷ್ಟು ಮೀಸಲಾತಿಯಲ್ಲಿ ವಿಶ್ವಕರ್ಮ ಸಮಾಜಕ್ಕೆ ಶೇ.3ರಷ್ಟು ಒಳಮೀಸಲಾತಿ ನೀಡಬೇಕು. ಸಮಾಜವನ್ನು ಪ್ರವರ್ಗ 1ಕ್ಕೆ ಸೇರಿಸಬೇಕು. ಜಾತಿ ಜನಗಣತಿ ಜಾರಿ, ರಾಜ್ಯದ ಒಂದು ವಿಶ್ವ ವಿದ್ಯಾಲಯಕ್ಕೆ ಅಮರಶಿಲ್ಪಿ ಜಕಣಾಚಾರಿ ಹೆಸರನ್ನು ಇಡಬೇಕು ಎಂದು ಆಗ್ರಹಿಸಿದರು.
ಕಬ್ಬಿಣ ಮತ್ತು ಮರಗೆಲಸ ಮಾಡುವ ನಿವೃತ್ತ ವಿಶ್ವ ಕರ್ಮರಿಗೆ 6 ಸಾವಿರ ಮಾಸಾಶನ ನೀಡಬೇಕು. ವಿಧಾನಸೌಧದ ಮುಖ್ಯ ದ್ವಾರದಲ್ಲಿ ಭಗವಾನ್​ ವಿಶ್ವಕರ್ಮ ಪ್ರತಿಮೆ ಸ್ಥಾಪಿಸಬೇಕು. ವಿಶ್ವಕರ್ಮ ನಿಗಮಕ್ಕೆ 300 ಕೋಟಿ ರೂ. ಅನುದಾನ ನೀಡುವುದು ಸೇರಿ ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಭಾಸ್ಕರ ಬಡಿಗೇರ, ಆನಂದರಾವ್​ ಬಡಿಗೇರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net