ಮಾತಿಗಿಂತ ದೃಶ್ಯಕ್ಕೆ ಹೆಚ್ಚಿನ ಮಹತ್ವವಿದೆ : ಚಿತ್ರ ನಿರ್ದೇಶಕ ಬಿ. ಸುರೇಶ್

DSC_343
Published on

ಮೈಸೂರು: ಪ್ರತಿಯೊಂದು ಮಗು ಮಾತು ಕಲಿಯುವ ಮುನ್ನ ಜನರನ್ನು, ಪ್ರಾಣಿ, ಪಕ್ಷಿಗಳನ್ನು, ವಸ್ತುಗಳನ್ನು ಆಕಾರದಿಂದ ಗುರುತಿಸುತ್ತದೆ. ನಂತರ ನಿಧಾನವಾಗಿ ಮಾತು ಕಲಿಯಲು ಪ್ರಾರಂಭಿಸುತ್ತದೆ. ಹಾಗಾಗಿ ಮಾತಿಗಿಂತ ದೃಶ್ಯಕ್ಕೆ ಹೆಚ್ಚಿನ ಮಹತ್ವ ಇದೆ ಎಂದು ಚಲನಚಿತ್ರ ನಿರ್ದೇಶಕ ಬಿ. ಸುರೇಶ್ ಅಭಿಪ್ರಾಯಪಟ್ಟರು.

ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ಗುರುವಾರ ‘ಸಿನಿಮೊಟೋಗ್ರಫಿ ಮತ್ತು ಫೋಟೋಗ್ರಫಿ’ ವಿಷಯದ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಮಾತಿಗೂ ಮುಂಚೆ ದೃಶ್ಯ ಎಲ್ಲರ ಕಣ್ಣ ಮುಂದೆ ಬರುತ್ತದೆ. ನಾವು ದೃಶ್ಯಗಳ ಮೂಲಕವೇ ಜಗತ್ತನ್ನು ಗ್ರಹಿಸುತ್ತೇವೆ. ಪ್ರಾಣಿಗಳು ದೃಶ್ಯಗಳ ಮೂಲಕ ತಮ್ಮ ನೆನಪುಗಳನ್ನು ಜಾಗೃತಗೊಳಿಸಿಕೊಳ್ಳುತ್ತವೆ. ಈ ಆಕಾರದಲ್ಲಿ ಇದ್ದರೆ ಅದು ನಾನು ತಿನ್ನುವ ಆಹಾರ ಎಂದು ಪ್ರಾಣಿಗಳಿಗೆ ತಿಳಿಯುತ್ತದೆ. ಒಂದುವೇಳೆ ಆಕಾರ ಬದಲಾವಣೆಯಾದರೆ ಅವುಗಳು ತಿನ್ನುವುದಿಲ್ಲ ಎಂದರು.

ಪ್ರಕೃತಿಯಲ್ಲಿರುವ ವಿವಿಧ ಆಕಾರಗಳನ್ನು ಸುಲಭವಾಗಿ ಗುರುತಿಸುವ ಸಲುವಾಗಿ ಹೆಸರು ನೀಡಲಾಗಿದೆ. ಒಂದುವೇಳೆ ಅವುಗಳ ಹೆಸರು ಬದಲಾವಣೆ ಮಾಡಿದರೂ ಅವುಗಳ ಆಕಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಉದಾಹರಣೆಗೆ ಕುದುರೆ ಚಿತ್ರದ ಕೆಳಗೆ ಬಾಗಿಲು ಎಂದು ಬರೆದರೆ ಕುದರೆ ಬಾಗಿಲಾಗಿ ಬದಲಾಗುವುದಿಲ್ಲ. ಯಾವುದೇ ಆಕಾರಗಳಿಗೆ ಮೂಲತಃ ಹೆಸರು ಇರುವುದಿಲ್ಲ, ನಮ್ಮ ಅನುಕೂಲಕೋಸ್ಕರ ಹೆಸರು ನೀಡಿದ್ದೇವಷ್ಟೆ. ಆದರೆ, ಯಾವುದೇ ಒಂದು ಆಕಾರವನ್ನು ನೆನಪಿಸಿಕೊಳ್ಳಲು ಮಾತು ನೆರವಿಗೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ರಂಗಭೂಮಿ ಕಲಾವಿದೆ ಆರ್. ರಶ್ಮಿ, ಹಿರಿಯ ಛಾಯಾಚಿತ್ರ ಕಲಾವಿದ ಎಂ.ಆರ್. ಮಂಜುನಾಥ್, ರವಿವರ್ಮ ಚಿತ್ರಕಲಾ ಶಾಲೆಯ ಪ್ರಾಚಾರ್ಯ ಶಿವಕುಮಾರ ಕೆಸರಮಡು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net