‘ಅನ್ನ’ಕ್ಕಾಗಿ ಹಂಬಲಿಸಿದವರ ದೃಶ್ಯಕಾವ್ಯ

mysore
Published on

ಮೈಸೂರು: ಅನ್ನ ಚಲನಚಿತ್ರವೂ ಅನ್ನಕ್ಕಾಗಿ ಹಂಬಲಿಸಿದ ಜನಗಳ ದೃಶ್ಯಕಾವ್ಯ ಎಂದು ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.


ಭಾನುವಾರ ಚಲನಚಿತ್ರ ವೀಕ್ಷಿಸಿ ಮಾತನಾಡಿದ ಅವರು, ಈ ಚಿತ್ರವೂ ಭಾರತೀಯ ಚಿತ್ರರಂಗದಲ್ಲಿ ದಾಖಲೆಯಾಗಿ ಉಳಿಯಲಿ ಎಂದು ಆಶಿಸಿದರು. 40 ವರ್ಷದ ಹಿಂದೆ ಅನ್ನಕ್ಕಾಗಿ ಏನೆಲ್ಲ ಜರುಗಿತ್ತು, ಶೋಷಿತ ಸಮದಾಯ ಪಟ್ಟ ಕಷ್ಟದ ಸನ್ನಿವೇಶ ಏನೇನು ಎಂಬುದನ್ನು ಸಿನಿಮಾದಲ್ಲಿ ಆರ್ದ್ರತೆಯಿಂದ ಚಿತ್ರೀಕರಿಸಲಾಗಿದೆ ಎಂದರು.

ಮೈಸೂರಿನ ಪ್ರತಿಭಾನ್ವಿತ ಯುವ ಕಲಾವಿದರು ಸೇರಿ, ಶ್ರಮ ಮತ್ತು ಶ್ರದ್ಧೆಯಿಂದ ನಿರ್ಮಿಸಿರುವ ಸಿನಿಮಾ ಪ್ರಯೋಗಾತ್ಮಕ ನೆಲೆಯಿಂದ ಮಹತ್ವದಾಗಿದೆ. ಶೋಷಿತರು ಹೋರಾಟದೊಂದಿಗೆ ಜೋಳ, ರಾಗಿ, ಸೊಪ್ಪು ತಿಂದು ಬದುಕುಳಿದರು. ಅವರಿಗೆಲ್ಲಾ ಹಬ್ಬಗಳಲ್ಲಿ ಮಾತ್ರ ಅನ್ನ ಸಿಗುತ್ತಿತ್ತು. ಸರ್ವಕ್ಕೂ ಅನ್ನವೇ ಕಾರಣ ಎನ್ನುವ ಆಶಯವನ್ನು ಎಳೆ ಎಳೆಯಾಗಿ ಸಿನಿಮಾ ನಿರೂಪಿಸಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.


ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಎಲ್ಲರಿಗೂ ಆಹಾರ ಭದ್ರತೆ ಈಗ ಇದೆ. ಆದರೆ, 1970-80ರ ದಶಕದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಅನ್ನಕ್ಕಾಗಿ ಜನರು ಪಟ್ಟ ಕಷ್ಟವನ್ನು ಈ ಸಿನಿಮಾ ಪರಿಣಾಮಕಾರಿಯಾಗಿ ಸೆರೆ ಹಿಡಿದಿದೆ ಎಂದರು.


ನಿರ್ಮಾಪಕ ಬಸವರಾಜು, ಕಥೆಗಾರ ಹನೂರು ಚನ್ನಪ್ಪ, ಸಂಭಾಷಣೆಕಾರ ಬಿ.ಎನ್.ಸಿದ್ದು ಪ್ರಸನ್ನ, ನಟಿ ಪದ್ಮಶ್ರೀ, ಕಲಾ ನಿರ್ದೇಶಕ ಮಹೇಶ್ವರ ಎನ್, ಸಹಾಯಕ ನಿರ್ದೇಶಕ ಮೊಹಮ್ಮದ್ ಸಿದ್ದಿಖ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net