

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆಯಲ್ಲಿನ ಬಾರ್ ಮಿಲ್ ಘಟಕದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು ಆ.10ರಂದು ಆರಂಭವಾಗಬೇಕಾಗಿದ್ದ ಘಟಕ ತನ್ನ ಉತ್ಪಾದನಾ ಚಟುವಟಿಕೆ ಮುಂದೂಡಿದೆ.
ಘಟಕ ತನ್ನ ಉತ್ಪಾದನೆ ಆರಂಭಿಸಲು ದಿನಾಂಕ ನಿಗದಿ ಬೆನ್ನಲ್ಲೇ ಬುಧವಾರ ಘಟಕದಲ್ಲಿ ಟ್ರೈಯಲ್ ನೋಡುವಾಗ ಘಟಕದ ಎಚ್.ಟಿ.ಮೋಟಾರ್‌ನಲ್ಲಿ ತಾಂತ್ರಿಕ ದೋಷ ಇರುವುದು ಕಂಡು ಬಂದಿದೆ. ಇದರಿಂದಾಗಿ ಮಿಷನ್ ರನ್ ಆಗಲು ಸಾಧ್ಯವಾಗದೆ ರಿಪೇರಿ ಮಾಡಿಸುವ ಸಲುವಾಗಿ ಉತ್ಪಾದನೆಯನ್ನು ಕೆಲ ದಿನಗಳ ಕಾಲ ಮುಂದೂಡಲಾಗಿದೆ.
ಕಳೆದ ಏಳು ತಿಂಗಳಿಂದ ಉತ್ಪಾದನೆ ಇಲ್ಲದೆ ಸ್ಥಗಿತಗೊಂಡಿದ್ದ ಯಂತ್ರದಲ್ಲಿ ದೋಷ ಕಂಡು ಬಂದಿದ್ದು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಕಾರ್ಮಿಕರು ನಿರತರಾಗಿದ್ದಾರೆ. ಶೀಘ್ರ ಯಂತ್ರ ಸರಿಯಾಗಲಿದ್ದು ಉತ್ಪಾದನೆ ಆರಂಭಿಸಲಿದೆ. ಗುರುವಾರ ಆರಂಭವಾಗಬೇಕಿದ್ದ ಘಟಕದ ಪುನರಾರಂಭ ಸದ್ಯ ಸ್ಥಗಿತಗೊಂಡಿದೆ ಎಂದು ಕಾರ್ಮಿಕ ವಲಯದಿಂದ ಕೇಳಿ ಬಂದಿದೆ.
ಆ.10ರಂದು ವಿಐಎಸ್‌ಎಲ್ ಕಾರ್ಖಾನೆಯ ಬಾರ್‌ಮಿಲ್ ಘಟಕದಲ್ಲಿ ಉತ್ಪಾದನೆ, ನಂತರದಲ್ಲಿ ಪ್ರೈಮರಿ ಮಿಲ್ ಕಾರ್ಯನಿರ್ವಹಿಸಲಿದೆ ಎಂಬ ಸೈಲ್ ಆಡಳಿತ ಮಂಡಳಿ ನಿರ್ದೇಶನದ ಮೇರೆಗೆ ಕಾರ್ಖಾನೆ ಅಧಿಕಾರಿಗಳು ಉತ್ಪಾದನೆ ಆರಂಭಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ನಾಮಫಲಕದಲ್ಲಿ ನೋಟಿಸ್ ಅಂಟಿಸುವ ಮೂಲಕ ಕಾರ್ಮಿಕರ ಗಮನಕ್ಕೆ ತಂದಿದ್ದರು. ಅದರ ಸಲುವಾಗಿ ಕಾರ್ಮಿಕರು ತಯಾರಿ ನಡೆಸಿದ್ದರಾದರೂ ಅಂತಿಮ ಕ್ಷಣದಲ್ಲಿ ಯಂತ್ರ ಕೈಕೊಟ್ಟಿದೆ.