

ಸರಗೂರು: ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದು ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ತಿಳಿಸಿದರು.
ತಾಲೂಕಿನ ಸಮೀಪದ ಬೀರಂಬಳ್ಳಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವ ಗ್ರಾಮಸ್ಥರಿಗೆ 25 ಸಾವಿರ ರೂ. ಧನಸಹಾಯ ಮಾಡಿ ನಂತರ ಮಾತನಾಡಿದರು.
ತಾಲೂಕಿನಲ್ಲಿ ಜೆಡಿಎಸ್ ಸಂಘಟಿಸುವ ನಿಟ್ಟಿನಲ್ಲಿ ಪಕ್ಷದ ಅಧ್ಯಕ್ಷರು, ಪದಾಧಿಕಾರಿ ಗಳು, ಮುಖಂಡರ ಸಮ್ಮುಖದಲ್ಲಿ ವಿವಿಧ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇನೆ. ಎಚ್.ಡಿ.ಕೋಟೆಗೆ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸಲಿದ್ದು, ಬೃಹತ್ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗುವುದು. ಕಾರ್ಯಕ್ರಮದಲ್ಲಿ ಸಾವಿರಾರು ಕಾಂಗ್ರೆಸ್‌ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.
ತಾಪಂ ಜಿಪಂ ಚುನಾವಣೆ ಬರುವುದರಿಂದ ಜೆಡಿಎಸ್ ಪಕ್ಷವನ್ನು ಬಲಗೊಳಿಸಲು ತಾಲೂಕಿನ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಿ ತಾಲೂಕಿನ ಜನತೆಗೆ ಸೇವೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಈ ವೇಳೆ ಕೃಷ್ಣನಾಯಕ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಸರಗೂರು ತಾಲೂಕು ಜೆಡಿಎಸ್ ಅಧ್ಯಕ್ಷ ಗೋಪಾಲಸ್ವಾಮಿ, ಯುವ ಮುಖಂಡ ಚರಣ್, ಹೆಗ್ಗನೂರು ಗ್ರಾಪಂ ಸದಸ್ಯ ಹಾಗೂ ಒಕ್ಕಲಿಗ ಸಂಘದ ತಾಲೂಕು ಅಧ್ಯಕ್ಷ ಸುಧೀರ್, ವಕೀಲ ಯೋಗೇಶ್, ಪ್ರಶಾಂತ್, ಗ್ರಾಮದ ಯಜಮಾನರಾದ ರಮೇಶ್, ಕಾಳಯ್ಯ, ಬಸವರಾಜು, ಗ್ರಾಮಸ್ಥರಾದ ಹನುಮಯ್ಯ, ರಾಜಯ್ಯ, ದಾಸರಾಜು, ಶೇಖರ್, ಶಿವಣ್ಣ, ಜಯಣ್ಣ, ಶ್ಯಾಮಸುಂದರ್, ಶಿವಯ್ಯ, ನಾಗರಾಜು, ಜಯಸೂರ್ಯ, ರವಿ, ಚನ್ನಪ್ಪಾಜಿ, ಕೃಷ್ಣಮೂರ್ತಿ, ನಿಂಗರಾಜು, ಡಾ. ರಾಮರಾಜ ಇತರರು ಇದ್ದರು.