ನದಿಪಾತ್ರದ ಜನರ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿ

HNL
Published on

ಹೊನ್ನಾಳಿ: ತುಂಗಭದ್ರಾ ನದಿಯಿಂದ ಮತ್ತಷ್ಟು ನೀರು ಬಿಡುವ ಸಾಧ್ಯತೆ ಹೆಚ್ಚಾಗಿದ್ದು, ನದಿಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಎಲ್ಲ ಮೂಲ ಸೌಕರ್ಯ ಒದಗಿಸುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ನೆರೆಹಾವಳಿ ಹಿನ್ನೆಲೆಯಲ್ಲಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿರುವ ಸಂತ್ರಸ್ತರನ್ನು ಭೇಟಿ ಮಾಡಿ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ತಾಲೂಕಿನ ನದಿಪಾತ್ರದ ಜನ ಜಾನುವಾರು ನದಿಗೆ ಇಳಿಯದಂತೆ ಟಾಂಟಾಂ ಹೊಡೆಸಿ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ತಾಲೂಕಿನ ಎರಡು ಕಾಳಜಿ ಕೇಂದ್ರದಲ್ಲಿ ಇರುವಂತೆ ಸೂಚಿಸಲಾಗಿದೆ ಎಂದರು.

ನೀರು ನುಗ್ಗಿರುವ ಮನೆಗಳನ್ನು ಪಟ್ಟಿ ಮಾಡಿ ತಲಾ 2500 ರೂ. ನೀಡುವಂತೆ ತಹಸೀಲ್ದಾರ್ ಪಟ್ಟರಾಜಗೌಡ ಆವರಿಗೆ ಸೂಚಿಸಿದರು.

ಪ್ರತಿವರ್ಷ ನೆರೆಹಾವಳಿ ಉಂಟಾದಾಗ ನಮ್ಮನ್ನು ಕಾಳಜಿ ಕೇಂದ್ರಕ್ಕೆ ಕಳುಹಿಸಿ ಮೂರ‌್ನಾಲ್ಕು ದಿನ ಇರಿಸಿಕೊಂಡು ವಾಪಸ್ ಕಳುಹಿಸುತ್ತಾರೆ. ನಮಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಎಲ್ಲಾದರೂ ಮನೆ ಕಟ್ಟಿಕೊಳ್ಳಲು ಖಾಲಿ ನಿವೇಶನ ನೀಡಬೇಕು ಎಂದು ಮಳೆ ಸಂತ್ರಸ್ತರು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಶಾಸಕ ಡಿ.ಜಿ. ಶಾಂತನಗೌಡ, ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ. ಸಾಧಕ ಬಾಧಕಗಳನ್ನು ಪರಾಮರ್ಶೆ ಮಾಡಿ ಜಾಗ ಕೊಡಿಸುವ ವ್ಯವಸ್ಥೆ ಮಾಡೋಣ ಎಂದು ಭರವಸೆ ನೀಡಿದರು.

ಹೊನ್ನಾಳಿ ಉಪವಿಭಾಗಾಧಿಕಾರಿ ವಿ. ಅಭಿಷೇಕ್, ತಹಸೀಲ್ದಾರ್ ಪಟ್ಟರಾಜಗೌಡ, ತಾಪಂ ಇಒ ರಾಘವೇಂದ್ರ, ಕಂದಾಯ ಅಧಿಕಾರಿಗಳಾದ ಜಯಪ್ರಕಾಶ್, ರಮೇಶ್, ಮುನ್ನೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net