ವಿಜಯವಾಡ ಮುನಿಸಿಪಾಲ್​ ಕಾರ್ಪೊರೇಷನ್​ ಭೇಟಿ: ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ಮಾಹಿತಿ ಹಂಚಿಕೆ

palike
Published on

ಬೆಂಗಳೂರು: ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಪಾಲಿಕೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತ ಅಧ್ಯಯನಕ್ಕಾಗಿ ನಗರಕ್ಕೆ ಆಗಮಿಸಿದ್ದ ವಿಜಯವಾಡ ಮುನಿಸಿಪಾಲ್​ ಕಾರ್ಪೊರೇಷನ್​ ಉಪ ಮೇಯರ್​ ನಿಯೋಗ, ಪಾಲಿಕೆ ಕೇಂದ್ರ ಕಚೇರಿಯ ಇಂಟಿಗ್ರೇಟೆಡ್​ ಕಮಾಂಡ್​ ಕಂಟ್ರೋಲ್​ ಸೆಂಟರ್​ (ಐಸಿಸಿಸಿ) ಭೇಟಿ ನೀಡಿ ಹಲವು ವಿಷಯ ತಿಳಿದುಕೊಂಡರು. ಈ ವೇಳೆ ಪಾಲಿಕೆಯ ಸಂಪೂರ್ಣ ಕಾರ್ಯವೈಖರಿ, ಮುಖ್ಯ ಆಯುಕ್ತರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ವಿಶೇಷ, ವಲಯ ಆಯುಕ್ತರು, ವಲಯಗಳು, ಅಧಿಕಾರಿ ಮತ್ತು ಸಿಬ್ಬಂದಿ ಕುರಿತು ನಿಯೋಗಕ್ಕೆ ಮಾಹಿತಿ ನೀಡಿದರು.

ನಾಗರಿಕರಿಂದ ಬರುವ ದೂರುಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವ ಸಲುವಾಗಿ ಐಸಿಸಿಸಿ ದೂರು ಕೇಂದ್ರ ನಿರ್ಮಾಣ ಮಾಡಲಾಗಿದೆ. ದೂರುಗಳು ನೀಡುವ ಸಲುವಾಗಿ ಸಹಾಯ 2.0 ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. 1533 ಸಹಾಯವಾಣಿ ಸಂಖ್ಯೆ ಇದೆ. ನಾಗರಿಕರು ದೂರು ನೀಡಿದ ಕೂಡಲೆ ಅದನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸುವ ಕೆಲಸ ನಮ್ಮ ಅಧಿಕಾರಿ, ಸಿಬ್ಬಂದಿ ಮಾಡಲಿದ್ದಾರೆ ಎಂದರು. ಕಸ ವಿಲೇವಾರಿ, ವಿದ್ಯುತ್​ ದೀಪ, ರಸ್ತೆ ಗುಂಡಿಗಳು, ರಾಜಕಾಲುವೆ ಹಾಗೂ ಸೈಡ್​ ಡೆನ್​ಗಳ ಸ್ವಚ್ಛತೆ ಸವಾಲಿನ ಕೆಲಸವಾಗಿದೆ.ಇವುಗಳ ಮೇಲೆ ಹೆಚ್ಚಿನ ಆದ್ಯತೆ ನೀಡಿ ಸಮಸ್ಯೆಗಳನ್ನು ಬಗಹೆರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಘನ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕವಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಸ್ಥಾಪಿಸಲಾಗಿದೆ. ಅದರ ಮೂಲಕ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ಮಳೆಗಾಲದ ಪ್ರಾರಂಭಕ್ಕೂ ಮುಂಚಿತವಾಗಿ ರಾಜಕಾಲುವೆ, ಒಳಚರಂಡಿ ಸ್ವಚ್ಛತೆ ಮಾಡಲಾಗುತ್ತಿದೆ. ರಸ್ತೆಗಳು ಹೆಚ್ಚು ಕಾಲ ಬಾಳಿಕೆ ಬರಬೇಕೆಂದು ಉದ್ದೇಶದಿಂದ ಟೆಂಡರ್​ ಶ್ಯೂರ್​, ವೈಟ್​ಟಾಪಿಂಗ್​ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಮುಖ್ಯ ಆಯುಕ್ತರು ಹೇಳಿದರು.

ಕೃಷ್ಣ ರಾಜೇಂದ್ರ ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗಿನ 9.2 ಕಿ.ಮೀ. ಉದ್ದದ ರಾಜಕಾಲುವೆಯಲ್ಲಿ ಜಲಮಾರ್ಗ ನಿರ್ಮಾಣದ ಕೋರಮಂಗಲ ರಾಜಕಾಲುವೆ (ಕೆ-100) (ನಾಗರಿಕ ಜಲಮಾರ್ಗ) ಯೋಜನೆ ಸ್ಥಳಕ್ಕೆ ನಿಯೋಗ ಭೇಟಿ ನೀಡಿ ನೀಡಿತ್ತು. ವಾಯು ವಿಹಾರಿಗಳ ವೀಣಾ ತಾಣ ಹಾಗೂ ಟೆಂಡರ್​ ಶ್ಯೂರ್​, ವೈಟ್​ಟಾಪಿಂಗ್​ ರಸ್ತೆಗಳ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ವಿಜಯವಾಡ ಮುನಿಸಿಪಲ್​ ಕಾಪೋರ್ರೇಷನ್​ನ ಉಪ ಮಹಾಪೌರೆ ಶೈಲಜ ರೆಡ್ಡಿ, ವೈಸಿಪಿ ಪ್ಲೋರ್​ ಲೀಡರ್​ ಆದ ವೆಂಕಟಸತ್ಯಾನಾರಾಯಣ, ಟಿಡಿಪಿ ಪ್ಲೋರ್​ ಲೀಡರ್​ ಉಮಿದಿ ವೆಂಕಟೇಶ್ವರ ರಾವ್​ ಮತ್ತಿತರರಿದ್ದರು.

ಹಸಿರೀಕರಣಕ್ಕೆ ಆದ್ಯತೆ: 

ಕುಡಿಯವ ನೀರು, ಒಳಚರಂಡಿ ವ್ಯವಸ್ಥೆಯನ್ನು ಜಲಮಂಡಳಿ ಇಲಾಖೆ ನೋಡಿಕೊಳ್ಳಲಿದೆ. ನಗರದಲ್ಲಿ ಆಯ್ದ ಕೆರೆಗಳಿಗೆ ತ್ಯಾಜ್ಯ ನೀರು ಸಂಸ್ಕರಣಾ ಟಕಗಳಿಂದ ಸಂಸ್ಕರಿಸಿದ ನೀರನ್ನು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಪಾಲಿಕೆಯ ಅರಣ್ಯ ವಿಭಾಗ ಪ್ರತಿ ವರ್ಷ ಸಸಿ ನೆಟ್ಟು ಪೋಷಣೆ ಮಾಡುತ್ತಿದೆ. ಪ್ರಸಕ್ತ ಸಾಲಿನಲ್ಲಿ 2 ಲಕ್ಷ ಸಸಿ ನೆಡುವ ಗುರಿ ಹೊಂದಿದ್ದು, ಮಳೆಗಾಲ ಪ್ರಾರಂಭವಾಗುವ ವೇಳೆಗೆ ಸಸಿಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ ಎಂದು ತುಷಾರ್​ ಗಿರಿನಾಥ್​ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net