

ಹಾನಗಲ್ಲ: ಆಶಾ ಕಾರ್ಯಕರ್ತೆಯರ ಬಹುದಿನಗಳ ಬೇಡಿಕೆಯಾದ 15 ಸಾವಿರ ಮಾಸಿಕ ಗೌರವಧನ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜ. 7 ರಂದು ಮುಖ್ಯಮಂತ್ರಿಗಳ ನಿವಾಸಕ್ಕೆ ಚಲೋ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಜ್ಯದ 48 ಸಾವಿರ ಆಶಾ ಕಾರ್ಯಕರ್ತೆಯರು ಪಾಲ್ಗೊಳ್ಳುವರು ಎಂದು ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯ ಗಂಗಾಧರ ಬಡಿಗೇರ ಪ್ರಕಟಿಸಿದರು.
ಪಟ್ಟಣದ ಜಗಜೀವನರಾಮ ಭವನದಲ್ಲಿ ಆಶಾ ಕಾರ್ಯಕರ್ತೆಯರ ತಾಲೂಕು ಘಟಕ, ರಾಜ್ಯ ಸಂಯುಕ್ತ ಆಶಾ ಕಾರ್ಯರ್ತೆಯರ ಸಂಘ ಮಂಗಳವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನಸಭಾ ಚುನವಣೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ. ಕೊಡುವುದಾಗಿ ಘೊಷಿಸಿದ ಸರ್ಕಾರ ಅದನ್ನು ಜಾರಿಗೆ ತರದೇ ಮೋಸ ಮಾಡಿದೆ. ಕರೊನಾ ಸಂದರ್ಭದಲ್ಲಿ ಜನರ ಸೇವೆ ಮಾಡಿದ ಆಶಾ ಕಾರ್ಯಕರ್ತೆಯರಿಗೆ ಅರೋಗ್ಯ ರಾಯಭಾರಿ ಎಂದು ಕರೆದರು. ಆದರೆ, ಸೌಲಭ್ಯ ಕೊಡುವಾಗ ಮಾತ್ರ ಕಡೆಗಣಿಸಲಾಗಿದೆ. ಬಜೆಟ್ನಲ್ಲಿ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳೂ ಒಂದು ಸಾವಿರ ರೂ. ಹೆಚ್ಚು ಕೊಡುವುದಾಗಿ ಪ್ರಕಟಿಸಿದರೂ ನೀಡಿಲ್ಲ. ಈ ಬಾರಿ ಸಿಎಂ ಸಿದ್ದರಾಮಯ್ಯ ಮನೆಗೆ ತೆರಳಿ ನಮ್ಮ ಬೇಡಿಕೆ ಈಡೇರುವವರೆಗೂ ಮರಳುವುದಿಲ್ಲ ಎಂದರು.
ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಜಯಶೀಲಾ ಬಂಕಾಪುರಮಠ ಮಾತನಾಡಿ, ಆಶಾ ಕಾರ್ಯಕರ್ತೆಯರಿಂದ ಚುನಾವಣೆಯಲ್ಲಿ ಕೆಲಸ ಮಾಡಿಸಿಕೊಂಡರೂ ನಯಾಪೈಸೆ ಗೌರವಧನ ನೀಡಲಿಲ್ಲ. ಮುಂದಿನ ಚುನಾವಣೆ ಬಹಿಷ್ಕರಿಸುತ್ತೇವೆ. 32 ಕೆಲಸಕ್ಕಾಗಿ ನಮ್ಮನ್ನು ನೇಮಿಸಿಕೊಂಡರು. ನಮ್ಮ ಕಷ್ಟಕ್ಕೆ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ನಮ್ಮ ಪ್ರತಿಭಟನೆಯಿದೆ. ಆರೋಗ್ಯ ಇಲಾಖೆ ಮೂಲಕ ನಮ್ಮನ್ನು ಹೆದರಿಸುವ ಹುನ್ನಾರ ನಡೆಯದು. ನಾವು ಹೆದರುವುದಿಲ್ಲ ಎಂದರು.
ಜಿಲ್ಲಾ ಕಾರ್ಯದರ್ಶಿ ರತ್ನಾ ಗಿರಣಿ, ತಾಲೂಕು ಅಧ್ಯಕ್ಷೆ ರತ್ನಾ ಮಕರವಳ್ಳಿ, ತಾಲೂಕು ಕಾರ್ಯದರ್ಶಿ ಲಕ್ಷ್ಮೀ ಕಬ್ಬೂರ, ತಾಲೂಕು ಸುಗಮಗಾರರಾದ ಲಕ್ಷ್ಮೀ ಸುಣಗಾರ, ಲಲಿತಾ ಟೋಪಣ್ಣನವರ, ಲೀಲಾವತಿ ಕೋತಿನ, ಗಂಗಮ್ಮ ಹೂಗಾರ, ಗಂಗಮ್ಮ ಮಡಿವಾಳರ, ನಂದಾ ಸೊರಬದ, ಪಾರ್ವತಿ ಹುಲ್ಲಾಳ, ಸೌಭಾಗ್ಯ ರ್ಬಾಕಿ, ವನಜಾಕ್ಷಿ ಇಂಗಳಕಿ, ಶೀಲಾ ಕಟಗಿ, ಸರೋಜಾ ಹೊಂಕಣ ಇದ್ದರು.