ಪ್ರತಿಮೆ ವಿರೋಧಿಸಿ ಸುತ್ತೂರು ಮಠಕ್ಕೆ ಭೇಟಿ ಹಾಸ್ಯಾಸ್ಪದ: ಬಿ.ಎಲ್.ಭೈರಪ್ಪ

Published on

ಮೈಸೂರು: ಡಾ.ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆ ನಿರ್ಮಿಸಲು ಅಡ್ಡಿಪಡಿಸಿ ನ್ಯಾಯಾಲಯದ ಮೆಟ್ಟಿಲೇರಿರುವ ರಾಜವಂಶಸ್ಥರು ಈಗ ಮತಕ್ಕಾಗಿ ಸುತ್ತೂರು ಮಠದ ಆಶೀರ್ವಾದ ಪಡೆಯಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಟೀಕಿಸಿದರು.
ಜಿಲ್ಲೆಗೆ ಶಿಕ್ಷಣ, ಆರೋಗ್ಯ, ದಾಸೋಹ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ರಾಜೇಂದ್ರ ಶ್ರೀಗಳ ಪ್ರತಿಮೆ ನಿರ್ಮಿಸದಂತೆ ರಾಜಮನೆತನದವರು ತಡೆ ನೀಡಿ ಬಟ್ಟೆ ಮುಚ್ಚಿಸಿದ್ದಾರೆ. ಕಾನೂನು ರೀತಿಯಲ್ಲಿಯೇ ಮೂರ್ತಿ ಸ್ಥಾಪನೆ ನಡೆಯುತ್ತಿದ್ದರೂ ಬೇಕೆಂದೇ ಅರಸು ಮಂಡಳಿ ಮೂಲಕ ರಾಜಮನೆತನದವರು ತಡೆಯೊಡ್ಡಲಾಯಿತು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇದಕ್ಕೆಲ್ಲ ಕಾರಣ ರಾಜಮನೆತನವಾಗಿದ್ದು, ಈಗ ಅವರದೇ ಕುಟುಂಬದವರು ಸಮಸ್ಯೆ ಬಗೆಹರಿಸದೆ ರಾಜಕೀಯಕ್ಕಾಗಿ ಮಠದತ್ತ ತೆರಳಿರುವುದು ಸರಿಯಲ್ಲ ಎಂದು ದೂರಿದರು.
ಈಗಲೂ ಕಾಲ ಮಿಂಚಿಲ್ಲ. ಕೂಡಲೇ ಸುತ್ತೂರು ಮಠಕ್ಕೆ ನೀಡಿದ ಸಮಸ್ಯೆಗೆ ಕ್ಷಮೆ ಕೇಳಿ, ಕೋರ್ಟ್‌ಗೆ ಸಲ್ಲಿಸಿದ ಮೂರ್ತಿ ಸ್ಥಾಪನೆ ತಡೆಯ ಮೇಲ್ಮನವಿಯನ್ನು ಹಿಂಪಡೆಯಲಿ ಎಂದು ಒತ್ತಾಯಿಸಿದರು.
ಜೆ.ಪಿ.ನಗರದ ಯೋಗ ಪ್ರತಿಷ್ಠಾನದ ನಿರ್ದೇಶಕರಾದ ವಾಸು, ಲೋಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net