

ಭಾಲ್ಕಿ: ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಖರಗ್‌ಪುರ ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಗೆ ಭೇಟಿ ನೀಡಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಪಿಯುಸಿ ಮತ್ತು ಜೆಇಇ ಕೋಚಿಂಗ್ ಪಡೆದು ಖರಗ್‌ಪುರ ಐಐಟಿಗೆ ಪ್ರವೇಶ ಪಡೆದ ೧೧ ವಿದ್ಯಾರ್ಥಿಗಳಾದ ರೋಹಿತ ಮೇತ್ರೆ, ಅಭಿಷೇಕ ಲಕೋಟೆ, ಪಂಕಜ ಭೋಸ್ಲೆ, ಸಂದೀಪ ಬಾಳೂರೆ, ಮಲ್ಲಿಕಾರ್ಜುನ ಬೆಮಳಗೆ, ಹೃತ್ವಿಕ್ ಯರೋಳೆ, ನಾಗರಾಜ ರೇಕುನಾಯಕ, ಅವಿನಾಶ ಕುರನೆ, ಪ್ರತೀಕ ಶೇರೆ ಮತ್ತು ಚಂದನ ಪೂಜ್ಯರನ್ನು ಗೌರವಿಸಿ ಆಶೀರ್ವಾದ ಪಡೆದರು.
ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಪ್ರಸಕ್ತ ವರ್ಷ ನಮ್ಮ ಸಂಸ್ಥೆಯಿಂದ ೧೧ ವಿದ್ಯಾರ್ಥಿಗಳು ಖರಗ್‌ಪುರ ಐಐಟಿಗೆ ಪ್ರವೇಶ ಪಡೆದಿರುವುದು ಹೆಮ್ಮೆಯ ಸಂಗತಿ. ಯಾವುದೇ ವ್ಯಸನಕ್ಕೆ ಬಲಿಯಾಗದೆ ಉತ್ತಮ ಚಾರಿತ್ರ್ಯ, ಆರೋಗ್ಯ, ವ್ಯಕ್ತಿತ್ವ ಕಾಪಾಡಿಕೊಂಡು ಐಐಟಿಯಲ್ಲೂ ಒಳ್ಳೆಯ ಫಲಿತಾಂಶ ಪಡೆದು ಉತ್ತಮ ಸಂಶೋಧಕರಾಗಿ ಹೆತ್ತವರು ಮತ್ತು ದೇಶಕ್ಕೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.
ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಜಗನ್ನಾಥ ರೆಡ್ಡಿ, ಹಿರಿಯ ಪತ್ರಕರ್ತ ಗುರುನಾಥ ಗಡ್ಡೆ ಇದ್ದರು.
ಒಂದು ಐಐಟಿ ನೂರು ವೈದ್ಯರಿಗೆ ಸಮ. ದೇಶದ ವಿವಿಧೆಡೆ ಸಂಶೋಧನಾ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಪ್ರಸಕ್ತ ವರ್ಷ ನಮ್ಮ ಗುರುಕುಲದ ವಿದ್ಯಾರ್ಥಿಗಳು ಐಐಟಿಗೆ ಪ್ರವೇಶ ಪಡೆದು ಉತ್ತಮ ಸಾಧನೆ ತೋರಿದ್ದಾರೆ.
| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ