ಯಲ್ಲಾಪುರಕ್ಕೆವಿಧುಶೇಖರ ಭಾರತೀ ಶ್ರೀ ಭೇಟಿ 18ರಂದು

VIDHUSHEKHAR SHREE
Published on

ಯಲ್ಲಾಪುರ: ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಏ. 18ರಂದು ಸಂಜೆ 7 ಗಂಟೆಗೆ ಪಟ್ಟಣಕ್ಕೆ ಆಗಮಿಸಲಿದ್ದಾರೆ. ಪಟ್ಟಣದ ವಿಶ್ವ ಹಿಂದು ಪರಿಷತ್ ಗಣಪತಿ ದೇವಸ್ಥಾನದ ಬಳಿ ಶ್ರೀಗಳನ್ನು ಸ್ವಾಗತಿಸಿ, ಮೆರವಣಿಗೆ ಮೂಲಕ ನಾಯಕನಕೆರೆ ಶಾರದಾಂಬಾ ದೇವಸ್ಥಾನಕ್ಕೆ ಕರೆದೊಯ್ಯಲಾಗುವುದು ಎಂದು ಕನ್ನಡ ವೈಶ್ಯ ಗೌರವಾಧ್ಯಕ್ಷ ಶ್ರೀಕಾಂತ ಶೆಟ್ಟಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ವತಿಯಿಂದ ಧೂಳಿ ಪಾದಪೂಜೆ ನೆರವೇರಿಸಲಾಗುವುದು. ರಾತ್ರಿ ಶ್ರೀಗಳಿಂದ ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ. ಸ್ವರ್ಣವಲ್ಲೀ ಶ್ರೀಗಳು ಸಾನ್ನಿಧ್ಯ ವಹಿಸುವರು. ಯಕ್ಷ ಗಾನ ವೈಭವ ಕಾರ್ಯಕ್ರಮ ನಡೆಯಲಿದೆ ಎಂದರು.
19ರಂದು ಬೆಳಗ್ಗೆ 8ಕ್ಕೆ ಶಾರದಾ ಚಂದ್ರಮೌಳೀಶ್ವರ ಪೂಜೆ, ಜಗದ್ಗುರುಗಳಿಂದ ಸಹಸ್ರಮೋದಕ ಗಣಹವನದ ಪೂರ್ಣಾಹುತಿ, ವೈಶ್ಯ ಸಮಾಜದ ರಜತ ಮಹೋತ್ಸವದ ಸಂದರ್ಭದಲ್ಲಿ ಶ್ರೀಗಳಿಗೆ ಭಿನ್ನವೆತ್ತಳೆ ಸಮರ್ಪಣೆ, ಹಮ್ಮಿಣಿ ಅರ್ಪಣೆ, ವಿದ್ವಾಂಸರಿಗೆ ಸನ್ಮಾನ, ಶ್ರೀಗಳಿಂದ ಆಶೀರ್ವಚನ, ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ವಿವಿಧ ಸಮಾಜಗಳ ಭಕ್ತರು ಪಾದಪೂಜೆ ಸಲ್ಲಿಸಲು ಅವಕಾಶವಿದೆ ಎಂದರು.

ಕನ್ನಡ ವೈಶ್ಯ ಸಮಾಜದ ತಾಲೂಕು ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಮಾತನಾಡಿ, ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಎರಡನೇ ಬಾರಿ ಶ್ರೀಗಳು ಯಲ್ಲಾಪುರಕ್ಕೆ ಆಗಮಿಸಲಿದ್ದು, ಏ. 19ರಂದು ಗ್ರಾಮದೇವಿ ದೇವಸ್ಥಾನ, ಹುಲ್ಲೋರಮನೆ ಗಜಾನನ ಮಾರುತಿ ದೇವಸ್ಥಾನಕ್ಕೆ ಭೇಟಿ ನೀಡುವರು. ಹಿಂದು ಸಮಾಜದ ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಗದ್ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದರು.

ಉಪಾಧ್ಯಕ್ಷ ಡಾ. ಗುರುರಾಜ ಶೆಟ್ಟಿ, ಕೋಶಾಧ್ಯಕ್ಷ ಸೂರಜ್ ಶೆಟ್ಟಿ, ಶಾರದಾಂಬಾ ದೇವಸ್ಥಾನದ ಕಾರ್ಯದರ್ಶಿ ನರಸಿಂಹ ಗೇರಗದ್ದೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net