

ಹಾವೇರಿ: ತಾಲೂಕಿನ ದೇವಗಿರಿ ಯಲ್ಲಾಪುರ ಬಳಿ ನಿರ್ಮಾಣ ಹಂತದಲ್ಲಿರುವ ಹಾವೇರಿ ಮೆಡಿಕಲ್ ಕಾಲೇಜು ಕಟ್ಟಡ ಸ್ಥಳಕ್ಕೆ ಜಿಲ್ಲೆಯ ಐವರು ಕಾಂಗ್ರೆಸ್ ಶಾಸಕರು ಮಂಗಳವಾರ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದರು.
ಕಾಲೇಜು ನಿರ್ದೇಶಕರು ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಎರಡನೇ ಬ್ಯಾಚ್ ಬರುವಷ್ಟರಲ್ಲಿ ಆಗಸ್ಟ್- ಸೆಪ್ಟೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಕಾಲೇಜಿನ ನೂತನ ಕಟ್ಟಡ ಕಾಮಗಾರಿ ಪರಿಶೀಲಿಸಿದ ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಯು.ಬಿ. ಬಣಕಾರ ಹಾಗೂ ಪ್ರಕಾಶ ಕೋಳಿವಾಡ ಅವರು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಕಳೆದ ವರ್ಷವೇ ಮೆಡಿಕಲ್ ಕಾಲೇಜು ಶುರುವಾಗಿದ್ದರೂ ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣವಾಗದ ಕಾರಣ ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ತರಗತಿ ನಡೆಸಲಾಗುತ್ತಿದೆ. ಆಗಸ್ಟ್, ಸೆಪ್ಟೆಂಬರ್ ವೇಳೆಗೆ ಸಿಇಟಿ ಮುಗಿಸಿ 2ನೇ ಬ್ಯಾಚ್ ವಿದ್ಯಾರ್ಥಿಗಳು ಬರಲಿದ್ದಾರೆ. ಆಗ ತರಗತಿ ನಡೆಸುವುದು ಕಷ್ಟವಾಗಲಿದೆ. ಅಷ್ಟರೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಗುತ್ತಿಗೆ ಒಪ್ಪಂದದ ಪ್ರಕಾರ ಕಳೆದ ಡಿಸೆಂಬರ್ ವೇಳೆಗೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಇನ್ನೂ ಮುಗಿಯದಿರಲು ಏನು ಕಾರಣ ಎಂಬುದನ್ನು ತಿಳಿಸಿದರೆ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟವರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಶಾಸಕರು ಭರವಸೆ ನೀಡಿದರು.
ಚುನಾವಣೆ ನೀತಿ ಸಂಹಿತೆ ಇತ್ಯಾದಿ ಕಾರಣದಿಂದ ಕಳೆದ 6 ತಿಂಗಳಿಂದ ರಾಜ್ಯ ಸರ್ಕಾರದಿಂದ ಅನುದಾನ ಬಂದಿಲ್ಲ. ಇದರಿಂದ ತೊಂದರೆಯಾಗಿದೆ ಎಂದು ಗುತ್ತಿಗೆದಾರರು ಅಳಲು ತೋಡಿಕೊಂಡರು. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಶಾಸಕರು ಆಶ್ವಾಸನೆ ನೀಡಿದರು.
ಹಾವೇರಿ ಮೆಡಿಕಲ್ ಕಾಲೇಜು ಡೀನ್ ಡಾ.ಉದಯ ಮುಳಗುಂದ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಯಾವ ಕೆಲಸವನ್ನೂ ಚುರುಕಾಗಿ ಮಾಡುತ್ತಿಲ್ಲ. ಸರಿಯಾಗಿ ಮಾಹಿತಿಯನ್ನೂ ನೀಡುತ್ತಿಲ್ಲ. ಈವರೆಗೆ ಮಾಡಿದಂತೆ ಇನ್ನು ಮುಂದೆ ಮಾಡಿದರೆ ನಡೆಯುವುದಿಲ್ಲ. ಇನ್ನು ಮುಂದೆ ಚುರುಕಾಗಬೇಕು. ನಿಮ್ಮಿಂದ ಸಾಧ್ಯವಾಗದಿದ್ದರೆ ಹೊರಡಬಹುದು ಎಂದು ಶಾಸಕರು ಎಚ್ಚರಿಕೆ ನೀಡಿದರು.
ಹಿರಿಯ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಸಿಬ್ಬಂದಿ ಹುದ್ದೆಗೆ ನೇಮಕಗೊಂಡವರಿಗೆ ಆದೇಶ ನೀಡಿಲ್ಲ. ಇದರಿಂದ ತರಗತಿ ನಡೆಸುವುದು ಕಷ್ಟವಾಗುತ್ತದೆ. ಕಾಯಂ ಹುದ್ದೆಗೆ ನೇಮಕಗೊಂಡವರಿಗೆ ಕರ್ತವ್ಯಕ್ಕೆ ಹಾಜರುಪಡಿಸಿಕೊಂಡು ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕರು ಸೂಚಿಸಿದರು.