ಕೇಂದ್ರ ರೇಷ್ಮೆ ಸಂಶೋಧನೆ, ತರಬೇತಿ ಸಂಸ್ಥೆಗೆ ಬ್ರೆಜಿಲ್ ಪ್ರತಿನಿಧಿಗಳ ಭೇಟಿ

7
Published on

ಮೈಸೂರು: ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ(ಸಿಎಸ್‌ಆರ್‌ಟಿಐ)ಗೆ ಬ್ರೆಜಿಲ್ ದೇಶದ ಪ್ರತಿನಿಧಿಗಳು ಭೇಟಿ ನೀಡಿ ಕಾರ್ಯವೈಖರಿ ವೀಕ್ಷಿಸಿದರು.
ಪರನಾ ಅಗ್ರಿಕಲ್ಚರ್ ಆಫ್ ದಿ ಸ್ಟೇಟ್‌ನ ಕಾರ್ಯದರ್ಶಿ ನಟಾಲಿನೋ ಅವನ್ಸ್ ಡಿಸೋಜಾ, ಐಡಿಆರ್ ಅಧ್ಯಕ್ಷ ರಿಚಾರ್ಡ್ ಗೋಲ್ಬಾ, ಇನ್‌ಟ್ಯೂಷನಲ್ ರಿಲೇಷನ್ಸ್ ಅಟ್ ಅರೌಕೇರಿಯಾ ಫೌಂಡೇಷನ್, ಡೈರೆಕ್ಟರ್ ಆಫ್ ಇನೊವೆಷನ್ ಅಟ್ ಅಬ್ರಸೆಡನ ಕ್ರಿಸ್ಟಿಯಾನ್ನೆ ಕಾರ್ಡೆರೋ ನಾಸಿಮೆಂಟೊ, ದಿ ಚೀಪ್ ಆಫ್ ಸ್ಟಾಫ್ ಆಫೀಸ್ ಸ್ಟೇಟ್ ಆಫ್ ಪರನಾ ಸಾಂಡ್ರಾ ಮೋಯಾ, ಅಟ್ ಅರೌಕೇರಿಯಾ ಫೌಂಡೇಷನ್‌ನ ಹಿರಿಯ ವ್ಯವಸ್ಥಾಪಕ ಜಾರ್ಜ್ ಎಡಿಸನ್ ರಿಬೈರೊ ತಂಡದಲ್ಲಿದ್ದರು.
ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ನಿರ್ದೇಶಕ ಡಾ.ಎಸ್.ಗಾಂಧಿದಾಸ್ ಅವರು, ತಂಡವನ್ನು ಸ್ವಾಗತಿಸಿ ಕೇಂದ್ರದ ವಿವಿಧ ವಿಭಾಗಗಳನ್ನು ಪರಿಚಯಿಸಿದರು. ವಿಜ್ಞಾನಿಗಳಾದ ಡಾ.ಭಾಗ್ಯ, ಡಾ.ಸಿ.ಎಂ.ಬಾಬು ಇದ್ದರು.
ವಾಣಿಜ್ಯ ಚಾಕಿ ಸಾಕಣೆ ಕೇಂದ್ರಕ್ಕೆ ಭೇಟಿ ನೀಡಿದಾಗ ವಿಜ್ಞಾನಿ ಡಾ.ಆರ್. ಮೀನಾಳ್ ಅವರು ರೇಷ್ಮೆ ಹುಳುವಿನ ಚಾಕಿ ಸಾಕಣೆೆ ಬಗ್ಗೆ ವಿವರಿಸಿದರೆ, ಡ್ರೀಪ್ ಪರ್ಟಿಗೇಷನ್ ಹಿಪ್ಪುನೇರಳ ಕುರಿತು ಡಾ. ಆರ್.ಮಹೇಶ್ ಅವರು ವಿವರಣೆ ನೀಡಿದರು. ಇನ್‌ಕ್ಯುಬೇಷನ್ ಸೆಂಟರ್ ಬಗ್ಗೆ ಡಾ.ಮಹಿಬಾ ಹೆಲೆನ್ ಮಾಹಿತಿ ನೀಡಿದರು. ರೇಷ್ಮೆಹುಳ ಶರೀರಶಾಸ್ತ್ರ ಲ್ಯಾಬ್‌ನಲ್ಲಿ ರೇಷ್ಮೆ ಹುಳುಗಳ ಕುರಿತು ಡಾ.ಕುಸುಮಾ ತಿಳಿಸಿಕೊಟ್ಟರು. ಡಾ.ವೈ. ತಿರುಪತೈಯ ಅವರು ರೇಷ್ಮೆ ಕೃಷಿಯ ಉಪ ಉತ್ಪನ್ನ ಬಗ್ಗೆ ವಿವರಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಸಂಸ್ಥೆ ನಿರ್ದೇಶಕ ಡಾ. ಎಸ್. ಗಾಂಧಿ ದಾಸ್ ಅವರು ಸಂಸ್ಥೆಯ ಸಂಶೋಧನೆ ಮತ್ತು ತಾಂತ್ರಿಕತೆಗಳು, ಆವಿಷ್ಕಾರಗಳ ಕುರಿತು ವಿವರಿಸಿ, ಹಿಪ್ಪುನೇರಳೆ ಮತ್ತು ರೇಷ್ಮೆ ಹುಳು ರೇಷ್ಮೆ ಕೃಷಿಗೆ ಹೊರತುಪಡಿಸಿ, ಚಹ, ಕಾರ್ಬನ್ ಡೈ ಆಕ್ಸೈಡ್ ಕಡಿಮೆಗೊಳಿಸುವಲ್ಲಿ ಹಾಗೂ ಕೈಟಿನ್, ಕೈಟೊಸಾನ್ ಮತ್ತು ಸೇರಿಸಿನ್ ಅನ್ನು ವೈದ್ಯಕೀಯ ರಂಗದಲ್ಲಿ ಬಳಕೆ ಮಾಡಲಾಗುತ್ತಿದೆ. ತುಂಬಾ ಜನರಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ತಿಳಿಸಿಕೊಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ತಂಡದಲ್ಲಿದ್ದ ಬ್ರೆಜಿಲ್‌ನ ನಟಾಲಿನೋ ಅವನ್ಸ್ ಡಿಸೋಜಾ ಅವರು, ರೇಷ್ಮೆ ಕೃಷಿಯ ಚಟುವಟಿಕೆಗಳು ಹೆಚ್ಚಿನ ಉದ್ಯೋಗ ಮತ್ತು ಲಾಭವನ್ನು ತರುವುದರಿಂದ ಜಂಟಿಯಾಗಿ ಕೆಲಸ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ರೇಷ್ಮೆ ಕೃಷಿಯಿಂದ ಅಭಿವೃದ್ಧಿಪಡಿಸಲಾದ ಮೌಲ್ಯವರ್ಧಿತ ಉತ್ಪನ್ನಗಳ ವ್ಯಾಪ್ತಿ ಮತ್ತು ಮಾರುಕಟ್ಟೆಯು ವಿಶೇಷವಾಗಿ ಔಷಧ ಮತ್ತು ನ್ಯೂಟ್ರಾಸ್ಯುಟಿಕಲ್ ಮೇಲೆ ಗಣ್ಯವ್ಯಕ್ತಿಗಳು ಒಲವು ತೋರಿದರು. ಭವಿಷ್ಯದಲ್ಲಿ ರೇಷ್ಮೆ ಕೃಷಿ ಚಟುವಟಿಕೆಗಳನ್ನು ಸಂಸ್ಥೆಯೊಂದಿಗೆ ಮಾಡುವ ಇಚ್ಛೆಯನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net