

ಹಾಸನ: ಹಾಸನದ ಜನತೆ ಮತ್ತು ಜಾತ್ರೆಗೆ ಆಗಮಿಸುವವರು ಹಾಸನಾಂಬ ದರ್ಶನ ಮಾಡಿ ನಂತರ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿ ಯಶಸ್ವಿಗೊಳಿಸಬೇಕಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹೇಮಾವತಿ ತೊಟಗಾರಿಕೆ ಸಂಘದ ಆಶ್ರಯದಲ್ಲಿ ಶ್ರೀ ಹಾಸನಾಂಬದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಗರದ ಸಿಲ್ವರ್ ಜ್ಯುಬಿಲಿ ಆರ್ಚರ್ಡ್ ಪಾರ್ಕ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿದಿನ ಬೆ.8 ರಿಂದ ರಾತ್ರಿ 10 ಗಂಟೆವರೆಗೆ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ. ಈ ಬಾರಿ ಹಾಸನಾಂಬ ದೇವಾಲಯದ ಗೋಪುರ, ಗರುಡಗಂಬ, ದೀಪ, ಸ್ವಸ್ತಿಕ್ ಮತ್ತು ಟಯರ್, ಸೈಕಲ್, ವಾಹನಗಳು, ಸ್ಕೂಟರ್, ಬಾಟಲ್‌ಗಳಂತಹ ಹಳೆಯ ಪರಿಕರ ಉಪಯೋಗಿಸಿ ಒಂದೊಂದು ರೀತಿಯ ಪರಿಕಲ್ಪನೆಗಳಲ್ಲಿ ಪ್ರಕೃತಿಯನ್ನು ಹಾಳು ಮಾಡದ ಹಾಗೆ ಯಾವ ರೀತಿಯಲ್ಲಿ ಉಳಿಸಿಕೊಳ್ಳಬೇಕು ಮತ್ತು ಇರುವ ವಸ್ತುಗಳನ್ನು ಹೇಗೆ ಬಳಸಬೇಕು ಎನ್ನುವುದರ ಕುರಿತು ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಹೇಮಾವತಿ ತೋಟಗಾರಿಕೆ ಸಂಘದ ಉಪಾಧ್ಯಕ್ಷ ಸುಜಾತಾ ನಾರಾಯಣ್, ತೋಟಗಾರಿಕೆ ಉಪನಿರ್ದೇಶಕ ಹಾಗೂ ಹೇಮಾವತಿ ತೋಟಗಾರಿಕೆ ಸಂಘದ ನಿರ್ದೇಶಕ ಎಚ್.ಆರ್.ಯೋಗೇಶ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಸೀಮಾ, ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಜಿ.ಎನ್.ಪವಿತ್ರಾ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇದ್ದರು.
ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬೆಳೆದಿರುವ ಬೆಳೆಗಳನ್ನು ಪ್ರದರ್ಶಿಸಲಾಗಿತ್ತು. ವಿವಿಧ ಇಲಾಖೆಯ ಮಳಿಗೆಗಳು ಹಾಗೂ ತಿಂಡಿ-ತಿನಿಸುಗಳು ಸೇರಿದಂತೆ ಅನೇಕ ವಿಧವಾದ ಮಳಿಗೆಗಳನ್ನು ಹಾಕಲಾಗಿದೆ.
ಜಿಲ್ಲೆಯಲ್ಲಿ ತೆಂಗು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ರೈತರ ಆರ್ಥಿಕತೆಯ ಮೂಲಾಧಾರವಾಗಿದೆ. ಇತ್ತೀಚೆಗೆ ಹಲವು ರೋಗ, ಕೀಟಬಾಧೆಯಿಂದ ತೆಂಗಿನಲ್ಲಿ ಇಳುವರಿ ಕುಂಠಿತಗೊಳ್ಳುತ್ತಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಅದರಂತೆ ತೆಂಗು ಬೆಳೆಯಲ್ಲಿ ರೋಗ/ಕೀಟ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿಯನ್ನು ಸಹ ನೀಡಲಾಗಿದೆ.
ನೈಸರ್ಗಿಕ ಸಂಪನ್ಮೂಲಗಳಾದ ಭೂಮಾತೆ, ಸೂರ್ಯ, ಹೇಮಾವತಿ, ನೀರಿನ ಜರಿಗಳನ್ನು ವಿವಿಧ ಬಗೆಯ ಬಣ್ಣ ಬಣ್ಣದ ಹೂಗಳಿಂದ ಸಿಂಗರಿಸಿ ಪ್ರದರ್ಶಿಸಲಾಗಿದೆ. ಶ್ರೇಷ್ಠ ಕವಿಗಳು, ಪ್ರಸಿದ್ಧ ರಾಜಕಾರಣಿಗಳ ಭಾವಚಿತ್ರವನ್ನು ತರಕಾರಿ ಕೆತ್ತನೆಯ ಮೂಲಕ ಪ್ರದರ್ಶಿಸಲಾಗಿದೆ. ಜತೆಗೆ ರಾಧಾ-ಕೃಷ್ಣ, ಬಲರಾಮ, ಬಾತುಕೋಳಿಗಳನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಪ್ರದರ್ಶಿಸಿರುವುದು ನೋಡುಗರ ಕಣ್ಮನ ಸೆಳೆಯುತ್ತಿದೆ.