

ವಿಜಯಪುರ:ಜಿಲ್ಲೆಯ ನಿಡಗುಂದಿ ತಾಲೂಕಿನ ತಹಸೀಲ್ದಾರ್ ಕಚೇರಿ, ನ್ಯಾಯಬೆಲೆ ಅಂಗಡಿ, ಅಂಗನವಾಡಿ ಹಾಗೂ ಗ್ರಾಮವೊನ್ ಕೇಂದ್ರಗಳಿಗೆ ಬುಧವಾರ ಜಿಲ್ಲಾಧಿಕಾರಿ ಡಾ. ಆನಂದ ಕೆ. ಭೇಟಿ ನೀಡಿ ಪರಿಶೀಲಿಸಿದರು.ನಿಡಗುಂದಿ ತಹಸೀಲ್ದಾರ್ ಕಚೇರಿ ಹಾಗೂ ಅಟಲ್ ಜನಸ್ನೇಹಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಡಿಸಿ, ಕೆಲಸ ಕಾರ್ಯಗಳಿಗೆ ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಕಾರ್ಯಗಳಿಗೆ ಸ್ಪಂದಿಸಬೇಕು. ಸಕಾಲ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ಯಾವುದೇ ಬಾಕಿ ಕಡತಗಳನ್ನು ಉಳಿಸಿಕೊಳ್ಳದೆ ನಿಗದಿತ ಸಮಯದಲ್ಲಿ ವಿಲೇವಾರಿಗೆ ಕ್ರಮ ವಹಿಸಬೇಕು. ಕಚೇರಿ ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ಕಚೇರಿ ಎದುರಿನ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ, ನ್ಯಾಯ ಬೆಲೆ ಅಂಗಡಿಯಲ್ಲಿ ಸ್ಟಾಕ್ ರಜಿಸ್ಟರ್ ನಿರ್ವಹಣೆ ಮಾಡಬೇಕು. ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಆಹಾರ ಧಾನ್ಯಗಳನ್ನು ಎಲ್ಲ ಪಡಿತರ ಚೀಟಿದಾರರಿಗೆ ಹಂಚುವಂತೆ ಸೂಚನೆ ನೀಡಿದರು.ಬಳಿಕ ಪಪಂ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿ, ನಗರದಾದ್ಯಂತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕಸ ಕಂಡಲ್ಲಿ ಫೋಟೋ ಕಳುಹಿಸಿ ಅಭಿಯಾನ ಸಮರ್ಪಕವಾಗಿ ಜಾರಿಗೊಳಿಸಿ ಕಸಮುಕ್ತವಾಗಿಸಲು ಕ್ರಮ ವಹಿಸಬೇಕೆಂದು ತಿಳಿಸಿದರಲ್ಲದೆ, ಕಸ ವಿಲೇವಾರಿ ಟಕ ಸ್ಥಾಪನೆಗೆ ಗುರುತಿಸಲಾದ ಸ್ಥಳದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಔಷಧ ವಿತರಣೆ ಕೌಂಟರ್ ಸೇರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಒದಗಿಸಲಾಗುತ್ತಿರುವ ಚಿಕಿತ್ಸೆ ಕುರಿತು ಪರಿಶೀಲಿಸಿದರು. ಮಕ್ಕಳು, ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಸೂಚಿಸಿ ನಂತರ ಡಯಾಬಿಟಿಸ್ ಕೇಂದ್ರಕ್ಕೆ ಭೇಟಿ ನೀಡಿದರು.ನಂತರ ಆಲಮಟ್ಟಿಯ ಮರಿಮಟ್ಟಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಮಕ್ಕಳಿಗೆ ನೀಡುವ ಚಿತ್ರಾನ್ನ&ಮೊಟ್ಟೆಯನ್ನು ಸ್ವತ@ ಸೇವಿಸಿ ಗುಣಮಟ್ಟ ಪರಿಶೀಲಿಸಿದರು. ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ತಿಳಿಸಿದರು. ಆಲಮಟ್ಟಿ ಗ್ರಾಮವೊನ್ ಕೇಂದ್ರಕ್ಕೂ ಭೇಟಿ ನೀಡಿದರು.
ನಿಡಗುಂದಿ ತಹಸೀಲ್ದಾರ್ ಎ.ಡಿ. ಅಮರಾವದಗಿ, ಪ.ಪಂ. ಮುಖ್ಯಾಧಿಕಾರಿ ಪ್ರತಾಪ ಕೊಡಗೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿಲ್ಪಾ ಹಿರೇಮಠ, ವೈದ್ಯಾಧಿಕಾರಿ ಪ್ರಕಾಶ ನಾಟೀಕಾರ, ಆಹಾರ ನಿರೀಕ್ಷಕ ಗುತ್ತರಗಿ, ಕಂದಾಯ ನಿರೀಕ್ಷಕ ಸಲೀಮ್ ಯಲಗೋಡ, ಗ್ರಾಮಾಡಳಿತಾಧಿಕಾರಿ ನಾನಾಗೌಡ ಪಾಟೀಲ ಮತ್ತಿತರರಿದ್ದರು.
ಆಲಮಟ್ಟಿಯ ಮರಿಮಟ್ಟಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಭೇಟಿ ನೀಡಿ ಪರಿಶೀಲಿಸಿದರು. ನಿಡಗುಂದಿ ತಹಸೀಲ್ದಾರ್ ಎ.ಡಿ. ಅಮರಾವದಗಿ, ಪ.ಪಂ. ಮುಖ್ಯಾಧಿಕಾರಿ ಪ್ರತಾಪ ಕೊಡಗೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿಲ್ಪಾ ಹಿರೇಮಠ ಇತರರಿದ್ದರು.