

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಉತ್ತರಾಖಂಡ್ ರಾಜ್ಯದ 6ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ರವಿಶಂಕರ್, ಸದಸ್ಯರಾದ ಜಂಗ್‌ಪಂಗಿ, ಎಂ.ಸಿ ಜೋಷಿ ಅವರ ನಿಯೋಗ ಅಧ್ಯಯನಕ್ಕಾಗಿ ಗುರುವಾರ ಗ್ರಾಮಾಂತರ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿತು.
ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿಯ ಅಭಿವೃದ್ಧಿ ಕಾರ್ಯಕ್ರಮಗಳ ಕಾರ್ಯವಿಧಾನಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ನಿಯೋಗದ ಸದಸ್ಯರು ಮಾಹಿತಿ ಪಡೆದುಕೊಂಡರು.
ಪಿಪಿಟಿ ಮೂಲಕ ಮಾಹಿತಿ ಹಂಚಿಕೆ: ಜಿಲ್ಲಾ ಪಂಚಾಯತಿ ಅಡಿಯಲ್ಲಿ ಬರುವ ಪಂಚಾಯಿತಿಯ ಜಿಲ್ಲ ತಾಲೂಕು, ಗ್ರಾಮ ಹಂತಗಳು, ಕೂಸಿನ ಮನೆ, ನರೇಗಾ, ಇ-ಸ್ವತ್ತು, ಗ್ರಾಮಗಳ ಸ್ವಚ್ಛತಾ ಕಾರ್ಯ ಮತ್ತು ತ್ಯಾಜ್ಯ ವಿಲೇವಾರಿ ಘಟಕ (ಸ್ವಚ್ಛ ಭಾರತ್ ಮಿಷನ್), ಅರಿವು ಕೇಂದ್ರಗಳು(ಗ್ರಂಥಾಲಯ), ಅಮೃತ ಸರೋವರ ಯೋಜನೆಯಡಿ ಕೆರೆಗಳ ಪುನಶ್ಚೇತನ ಕಾರ್ಯ, ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನಗಳ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎನ್ ಅನುರಾಧಾ ವಿವರವಾಗಿ ಪಿಪಿಟಿ ಮೂಲಕ ಮಾಹಿತಿ ಪ್ರಸ್ತುತ ಪಡಿಸಿದರು.
ವಿವಿಧೆಡೆ ಭೇಟಿ: ದೇವನಹಳ್ಳಿ ತಾಲೂಕು ಜಾಲಿಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ನಿಯೋಗದ ಸದಸ್ಯರು ಗ್ರಾಮ ಪಂಚಾಯಿತಿಯ ಸೇವೆಗಳು ಕುರಿತು ಮಾಹಿತಿ ಪಡೆದುಕೊಂಡರು. ಘನತ್ಯಾಜ್ಯ ವಿಲೇವಾರಿ ಘಟಕ, ಅರಿವು ಕೇಂದ್ರ, ಕೂಸಿನ ಮನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೊಡ್ಡಬಳ್ಳಾಪುರ ನಗರಸಭೆಗೆ ಭೇಟಿ ನೀಡಿ ಆಡಳಿತ ವೈಖರಿ, ಕಾರ್ಯವಿಧಾನ, ಆದಾಯ ವಿಧಾನ, ತೆರಿಗೆ, ಕ್ರಿಯಾ ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಜಿಲ್ಲಾ ಪಂಚಾಯಿತಿ ಅಡಿ ನಡೆಯುತ್ತಿರುವ ಕಾಮಗಾರಿಗಳು ಅವುಗಳ ಗುಣಮಟ್ಟದ ಪರಿಶೀಲನೆ ನಡೆಸಲಾಯಿತು. ಕೂಸಿನ ಮನೆಯಲ್ಲಿ ಮಕ್ಕಳು ಹಾಗೂ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದ ಸದಸ್ಯರು ಮಾಹಿತಿ ಪಡೆದುಕೊಂಡರು. ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿ ಕಾರ್ಯವಿಧಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.