ವಿನಾಯಕನ ವಿರಾಟ ರೂಪ ದರ್ಶನ

Artist giving Finishing touch for Ganesh Idol.
Published on

ಬಸವರಾಜ ಇದ್ಲಿ ಹುಬ್ಬಳ್ಳಿ

ಬರ, ನೆರೆ, ಕರೊನಾ ಸೇರಿ ವಿವಿಧ ಕಾರಣಗಳಿಗೆ ಕೆಲ ವರ್ಷಗಳಿಂದ ಮಂಕಾಗಿ ಹೋಗಿದ್ದ ಹುಬ್ಬಳ್ಳಿ ಸಾರ್ವಜನಿಕ ಗಣೇಶೋತ್ಸವವನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಹುಬ್ಬಳ್ಳಿಗರು ಸಜ್ಜಾಗಿದ್ದಾರೆ.

ಕರೊನಾ ಸಾಂಕ್ರಾಮಿಕದ ಆತಂಕ ದೂರವಾಗಿದೆ. ಇನ್ನೊಂದೆಡೆ ಉತ್ತಮ ಮಳೆಯಾಗಿದ್ದು, ತಡವಾಗಿಯಾದರೂ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಕೆಲವೆಡೆ ಮುಂಗಾರು ಕೈ ಕೊಟ್ಟಿರುವುದರಿಂದ ಉತ್ತಮ ಹಿಂಗಾರಿನ ನಿರೀಕ್ಷೆಯಲ್ಲಿ ಇದ್ದಾರೆ.

ಹಾಗಾಗಿ ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸುಸೂತ್ರವಾಗಿ ನಡೆಸಿಕೊಡು ಗಣೇಶ… ಎಂದು ಪ್ರಾರ್ಥನೆ ಮಾಡಲು ಭಕ್ತರು ಸಜ್ಜಾಗಿದ್ದಾರೆ.

ಹುಬ್ಬಳ್ಳಿಯ ಸಾರ್ವಜನಿಕ ಗಣೇಶೋತ್ಸವ ನಾಡಿನಲ್ಲಿ ಪ್ರಸಿದ್ಧಿ ಪಡೆದಿದೆ.

ಮೊದಲೆಲ್ಲ ಧಾರವಾಡ ಜಿಲ್ಲೆ ಮಾತ್ರವಲ್ಲ, ಅಕ್ಕಪಕ್ಕದ ಜಿಲ್ಲೆಗಳಿಂದಲೂ ಚಕ್ಕಡಿ, ಟ್ರ್ಯಾಕ್ಟರ್​ಗಳನ್ನು ತೆಗೆದುಕೊಂಡು ಗುಂಪು ಗುಂಪಾಗಿ ಬಂದು ಗಣೇಶನ ವೀಕ್ಷಣೆ ಮಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಕಾರು, ಬಸ್, ಬೈಕ್, ಇತ್ಯಾದಿಗಳಲ್ಲಿ ಆಗಮಿಸಿ ನೋಡುತ್ತಿದ್ದಾರೆ.

ಹೀಗೆ ಬಂದ ಭಕ್ತರಿಗಾಗಿ ಹುಬ್ಬಳ್ಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯವರು ಗಣೇಶ ದರ್ಶನದ ವ್ಯವಸ್ಥೆಯೊಂದಿಗೆ ಉಪಾಹಾರ, ಊಟ, ಪ್ರಸಾದದ ವ್ಯವಸ್ಥೆ ಮಾಡುತ್ತ ಬಂದಿದ್ದಾರೆ.

ದೂರದೂರಿಂದ ಬರುವವರು ಇಡೀ ರಾತ್ರಿ ಗಣೇಶನ ವೀಕ್ಷಣೆ ಮಾಡಿ ಬೆಳಗ್ಗೆ ವಾಪಸ್ ಹೋಗುತ್ತಾರೆ. ಹಾಗಾಗಿ ಹುಬ್ಬಳ್ಳಿ ಗಣೇಶೋತ್ಸವ ವಿಶೇಷ ಆಚರಣೆಯಾಗಿ ಮಾರ್ಪಟ್ಟಿದೆ.

ಸಿದ್ಧತೆ ಶುರು

ಪಾರ್ವತಿತನಯ ಶ್ರೀ ಗಣೇಶನ ವಿರಾಟ ರೂಪ ದರ್ಶನಕ್ಕೆ ನಗರದ ವಿವಿಧ ಕಡೆಗಳಲ್ಲಿ ಸಿದ್ಧತೆಗಳು ಭರಪೂರ ನಡೆದಿವೆ.

ಈಗಾಗಲೇ ಅನೇಕ ಕಲಾವಿದರು ಗಣೇಶನ ಮೂರ್ತಿಗಳನ್ನು ತಯಾರು ಮಾಡುತ್ತಿದ್ದು, ಬೃಹತ್ ವಿಗ್ರಹಗಳು ಸಿದ್ಧಗೊಳ್ಳುತ್ತಿವೆ.

ಪೌರಾಣಿಕ, ಸಾಂಸ್ಕೃತಿಕ, ಭಾರತೀಯತೆ, ರಾಮಾಯಣ, ಮಹಾಭಾರತದ ಸನ್ನಿವೇಶಗಳು ಅಷ್ಟೇ ಅಲ್ಲದೆ, ಆಧುನಿಕ ಭಾರತದ ವೈಭವಗಳನ್ನು ಸಾರುವ ಸಂದರ್ಭಗಳನ್ನು ಶ್ರೀಗಣೇಶನ ಮಂಟಪಗಳಲ್ಲಿ ಪ್ರದರ್ಶನ ಮಾಡಲು ಸಮಿತಿಯವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಗಣೇಶ ಎಂದರೆ ಐತಿಹಾಸಿಕ ಹಾಗೂ ಆಧುನಿಕತೆಯ ಸ್ಪರ್ಶ ಇದ್ದೇ ಇರುತ್ತದೆ.

ಪೌರಾಣಿಕ ಕಥೆಗಳು ಒಂದೆಡೆಯಾದರೆ, ಆಧುನಿಕ ಜಗತ್ತಿನ ಚತುರತೆಗಳು ಗಣೇಶ ಮಂಟಪದಲ್ಲಿ ಬಿಂಬಿತವಾಗಲಿವೆ. ವಿಶೇಷವಾಗಿ ಈ ಬಾರಿ ಚಂದ್ರಯಾನ, ಸರ್ಕಾರದ ಯೋಜನೆಗಳು, ಬೆಲೆ ಏರಿಕೆ, ಭಾರತೀಯ ಸಂಸ್ಕೃತಿ ಅನಾವರಣವಾಗಲಿವೆ.

ಹೆಚ್ಚು ಜನರ ನಿರೀಕ್ಷೆ

ಕಳೆದ ಕೆಲ ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವವು ಅಷ್ಟೊಂದು ಅದ್ದೂರಿಯಾಗಿ ನಡೆದಿಲ್ಲ.

ಇದೀಗ ಎಲ್ಲರಿಗೂ ಉತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಸಡಗರದಿಂದ ಮಾಡುವ ಹುಮ್ಮಸ್ಸು ಬಂದಿದೆ.

ಇದರೊಂದಿಗೆ ರಾಜ್ಯ ಸರ್ಕಾರ ಉಚಿತ ಬಸ್ ಸೌಲಭ್ಯ ನೀಡಿರುವುದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಗಣೇಶೋತ್ಸವಕ್ಕೆ ಹರಿದು ಬರುವ ನಿರೀಕ್ಷೆ ಇದೆ.

ಈ ಎಲ್ಲ ಹಿನ್ನೆಲೆಯಲ್ಲಿ ಗಣೇಶ ಮಂಡಳಿಯವರು ಏನಾದರೂ ವಿಶೇಷ ಮಾಡುವ ಆಲೋಚನೆಯಲ್ಲಿದ್ದಾರೆ. ಹುಬ್ಬಳ್ಳಿ ನಗರವೊಂದರಲ್ಲೇ ಪ್ರತಿ ವರ್ಷ 500ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ.

ಇದೇ ರೀತಿ ಧಾರವಾಡದಲ್ಲೂ ಗಣೇಶೋತ್ಸವ ಸಂಭ್ರಮದಿಂದ ನಡೆಯುತ್ತದೆ.

ದುರ್ಗದಬೈಲ್, ಅಕ್ಕಿಹೊಂಡ, ಬಾಬಾಸಾನ ಗಲ್ಲಿ, ಗಾಂಧಿ ಮಾರ್ಕೆಟ್, ಹಿರೇಪೇಟೆ, ಹಳೇಹುಬ್ಬಳ್ಳಿ, ಬಮ್ಮಾಪುರ ಓಣಿ, ಸರಾಫ್ ಕಟ್ಟಿ, ಸ್ಟೇಶನ್ ರಸ್ತೆ, ಮರಾಠಾ ಗಲ್ಲಿ, ದಾಜಿಬಾನ ಪೇಟ, ವಿದ್ಯಾನಗರ, ಕಿಮ್್ಸ ಮುಂತಾದ ಕಡೆಗಳಲ್ಲಿ ಪ್ರತಿ ವರ್ಷ ವಿಶೇಷ ಅಲಂಕಾರ ಹಾಗೂ ಮೂರ್ತಿಗಳನ್ನು ಇಟ್ಟು ಭಕ್ತರ ಆಕರ್ಷಣೆಯ ಕೇಂದ್ರ ಬಿಂದುವಾಗಿ ಮಾಡುತ್ತಾರೆ.

ಈ ಬಾರಿ ಇನ್ನಷ್ಟು ಉತ್ಸಾಹ, ಹುಮ್ಮಸ್ಸಿನಿಂದ ಭಕ್ತಗಣ ಶ್ರೀಗಣೇಶನ ಆರಾಧನೆಗೆ ಸಜ್ಜಾಗಿದ್ದಾರೆ.

ಪ್ರತಿ ವರ್ಷದಂತೆ ಶ್ರೀ ಗಣೇಶೋತ್ಸವಕ್ಕೆ ಹುಬ್ಬಳ್ಳಿ ಸಜ್ಜಾಗುತ್ತಿದೆ. ಈ ಬಾರಿ ಸಡಗರ ಹೆಚ್ಚಾಗಲಿದೆ. ಭಾರತೀಯರ ಹಬ್ಬಗಳಲ್ಲಿ ಗಣೇಶನಿಗೆ ವಿಶೇಷ ಸ್ಥಾನವಿದೆ. ಗಣೇಶ ಮಂಡಳಿಯವರು ಭಕ್ತಿಭಾವದಿಂದ ಉತ್ಸವ ಆಚರಣೆಗೆ ನಿರ್ಧರಿಸಿದ್ದಾರೆ. ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಇರುವುದರಿಂದ ಹೆಚ್ಚಿನ ಜನರು ಬರುವ ಸಾಧ್ಯತೆ ಇದ್ದು, ಹುಬ್ಬಳ್ಳಿ ಗಣೇಶೋತ್ಸವದ ಸಂಭ್ರಮ ಇಮ್ಮಡಿಯಾಗಲಿದೆ. 11 ದಿನ ನಡೆಯುವ ಉತ್ಸವದಲ್ಲಿ ಭಕ್ತರ ಅನುಕೂಲಕ್ಕಾಗಿ ಪ್ರಸಾದ, ಉಪಾಹಾರ, ಊಟದ ವ್ಯವಸ್ಥೆ ಮಾಡಲು ಸಮಿತಿಯವರು ತೀರ್ವನಿಸಿದ್ದಾರೆ.- ಅಮರೇಶ ಹಿಪ್ಪರಗಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹಾಮಂಡಳದ ಗೌರವ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net