

ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಸ್ಥೆಯ ಕನ್ವೆನ್ಶನ್ ಸೆಂಟರ್‌ನಲ್ಲಿ ದಿಲ್ಲಿಯಲ್ಲಿಯ ಪ್ರಯಾಶ ಎಕ್ಸಿಬಿಷನ್ ಆ್ಯಂಡ್ ಪ್ರಮೋಶನ ಹಮ್ಮಿಕೊಂಡಿರುವ ‘ವಿಷನ್ ಕರ್ನಾಟಕ-25’ ಪ್ರದರ್ಶನಕ್ಕೆ ಎರಡನೇ ದಿನ ನಗರದ ವಿವಿಧ ಶಾಲಾ-ಕಾಲೇಜುಗಳಿಂದ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆದರು.
ಮೂರು ದಿನಗಳ ಕಾಲ ನಡೆಯುತ್ತಿರುವ ವಿಷನ್ ಕರ್ನಾಟಕ ಪ್ರದರ್ಶನದ ಡಿಆರ್‌ಡಿಒ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಡಲಾದ ಭಾರತದಲ್ಲೇ ತಯಾರಿಸಲ್ಪಟ್ಟ ಶಸ್ತ್ರಾಸ್ತ್ರಗಳು ಮತ್ತು ಹೆಲಿಕಾಪ್ಟರ್ಸ್, ನೂತನ ತಂತ್ರಜ್ಞಾನಗಳನ್ನು ಒಳಗೊಂಡಿರುವ ಸೈನಿಕರ ಬಟ್ಟೆಗಳು, ಕಾರ್ಯವಿಧಾನಗಳನ್ನು ನೋಡಿ ವಿದ್ಯಾರ್ಥಿಗಳು ಬೆರಗಾದರು.
ದೇಶದೊಳಗೆ ತುರ್ತು ಸಂದರ್ಭ ಹಾಗೂ ಯುದ್ಧ ಸಂದರ್ಭದಲ್ಲಿ ಸೈನಿಕರು ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಾರೆ. ಶಸ್ತ್ರಾಸ್ತ್ರಗಳ ತಯಾರಿಕೆ, ಬಳಕೆ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ವಂದೇ ಭಾರತ ರೈಲು, ಮೆಟ್ರೋ, ನೈಸರ್ಗಿಕ ಸಂಪತ್ತು ಸಂರಕ್ಷಣೆ, ಭೂಗೋಳ ಶಾಸ್ತ್ರದ ಅಧ್ಯಯನ, ಸಂಶೋಧನೆಗಳ ಕುರಿತು ತಿಳಿಸಿದರು.
ಸೈಬರ್ ವಂಚನೆ, ಬ್ಯಾಂಕ್ ಖಾತೆಗಳ ಹ್ಯಾಕ್, ಆನ್‌ಲೈನ್ ಮಾರ್ಕೆಟಿಂಗ್ ಕುರಿತು ಆರ್‌ಬಿಐ ಅಧಿಕಾರಿಗಳು ಜನರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಮತ್ತೊಂದೆಡೆ ಬಿಐಎಸ್ ಅಧಿಕಾರಿಗಳು ವಸ್ತುಗಳನ್ನು ಖರೀದಿಸುವಾಗ ಹೇಗೆ ಜಾಗೃತರಾಗಿಬೇಕು. ವಸ್ತುಗಳ ಖರೀದಿ ವೇಳೆ ಗುಣಮಟ್ಟ ಕುರಿತು ಖಚಿತ ಪಡಿಸಿಕೊಳ್ಳುವ ಕುರಿತು ಸಲಹೆ ನೀಡಿದರು. ಆರೋಗ್ಯ ಇಲಾಖೆಯಲ್ಲಿ ವಿವಿಧ ಯೋಜನೆಗಳ ಸದುಪಯೋಗ ಕುರಿತು ಅಧಿಕಾರಿಗಳು ಜನರಿಗೆ ತಿಳಿವಳಿಕೆ ನೀಡಿದರು.