ಜಿಲ್ಲಾದ್ಯಂತ 17 ಆಶಾಕಿರಣ ದೃಷ್ಟಿ ಕೇಂದ್ರಗಳು ಆರಂಭ

CTD NEWS ASHA KIRANA----
Published on

ಚಿತ್ರದುರ್ಗ: ನಗರದ ಜಿಲ್ಲಾಸ್ಪತ್ರೆ ಸೇರಿ ರಾಜ್ಯಾದ್ಯಂತ 393 ಆಶಾಕಿರಣ ದೃಷ್ಟಿ ಕೇಂದ್ರಗಳಿಗೆ ಏಕಕಾಲಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಆರೋಗ್ಯ ಸಚಿವ ಆರ್. ದಿನೇಶ್‌ಗುಂಡೂರಾವ್ ವರ್ಚ್ಯುವುಲ್ ಮೂಲಕ ಗುರುವಾರ ಚಾಲನೆ ನೀಡಿದರು.

ಚಿತ್ರದುರ್ಗ ಜಿಲ್ಲಾಸ್ಪತ್ರೆ ಕಣ್ಣಿನ ವಿಭಾಗದಲ್ಲಿ ಸಾಂಕೇತಿವಾಗಿ ಚಾಲನೆ ನೀಡಿ ಮಾತನಾಡಿದ ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಈ ಕೇಂದ್ರಗಳ ಸ್ಥಾಪನೆಗೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಜಿಲ್ಲೆ, ತಾಲೂಕು ಆಸ್ಪತ್ರೆಗಳು ಹಾಗೂ ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳು ಸೇರಿ ಚಿತ್ರದುರ್ಗ ಜಿಲ್ಲಾದ್ಯಂತ 17 ಸ್ಥಳಗಳಲ್ಲಿ ಕಣ್ಣಿನ ಚಿಕಿತ್ಸೆಯ ಸೇವೆಗಳನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಅಂಧತ್ವ ನಿವಾರಣಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಒ. ನಾಗರಾಜ್ ಮಾತನಾಡಿ, ಈ ಹಿಂದೆ ಆಶಾಕಿರಣ ಯೋಜನೆಯಡಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಮನೆ, ಮನೆ ಭೇಟಿ ನೀಡಿ ಆಶಾ ಕಾರ್ಯಕರ್ತೆಯರು ಜನರ ಕಣ್ಣಿನ ಪರೀಕ್ಷೆ ನಡೆಸಿದ್ದಾರೆ. 2ನೇ ಹಂತದಲ್ಲಿ ಸಹಾಯಕ ನೇತ್ರಾಧಿಕಾರಿಗಳು ಮತ್ತು ಕಣ್ಣಿನ ತಜ್ಞರ ಮೂಲಕ ಈಗಾಗಲೇ ಗುರುತಿಸಿರುವ ದೃಷ್ಟಿ ದೋಷವಿರುವವರ ತಪಾಸಣೆ ನಡೆಸಲಾಗಿದೆ ಎಂದರು.

ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮತ್ತು ಉಚಿತ ಕನ್ನಡಕಗಳನ್ನು ವಿತರಿಸುತ್ತಿರುವ ಈ ಯೋಜನೆಯ 3ನೇ ಹಂತದ ಭಾಗವಾಗಿ ಆಶಾಕಿರಣ ದೃಷ್ಟಿಕೇಂದ್ರಗಳು ಸ್ಥಾಪನೆಯಾಗಿವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ, ಆರ್‌ಎಂಒ ಡಾ. ಆನಂದ್ ಪ್ರಕಾಶ್, ಡಾ. ಶಿಲ್ಪಾ, ಡಾ. ಪ್ರದೀಪ್, ಸಹಾಯಕ ನೇತ್ರಾ ಧಿಕಾರಿ ಕೆ.ಸಿ. ರಾಮು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net