ವಿಶ್ವೇಶತೀರ್ಥರು ನೆಟ್ಟ ಸಸಿಗಳಿಗೆ ಆವರಣ

plant
Published on

ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪ್ರಥಮ ಆರಾಧನೆ ಪ್ರಯುಕ್ತ ಗುರುವಾರ ಬೆಂಗೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶಿಲಾ ವೃಂದಾವನ ಪ್ರತಿಷ್ಠಾಪನೆ, ಉಡುಪಿ ಹಾಗೂ ದೇಶದ ವಿವಿಧೆಡೆ ಪೇಜಾವರ ಮಠದ ಶಾಖೆಗಳಲ್ಲಿ ಶ್ರೀಗಳ ಸಂಸ್ಮರಣೆ ನಡೆಯಿತು.

ಮಠದ ಆಡಳಿತಕ್ಕೆ ಒಳಪಟ್ಟ ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನ, ಕರಂಬಳ್ಳಿ ವೆಂಕಟರಮಣ ದೇವಸ್ಥಾನ, ಕೊಡವೂರು ಶಂಕರನಾರಾಯಣ ದೇವಸ್ಥಾನ, ಪಾಜಕದ ಆನಂದತೀರ್ಥ ವಿದ್ಯಾಲಯಗಳಲ್ಲಿ ವಿಶ್ವೇಶತೀರ್ಥರು ವಿವಿಧ ಸಂದರ್ಭಗಳಲ್ಲಿ ಭೇಟಿ ನೀಡಿ ನೆಟ್ಟಿದ್ದ ಸಸಿಗಳಿಗೆ ಸುಂದರ ಕಟ್ಟೆಗಳನ್ನು ಕಟ್ಟಿ ಪುಷ್ಪಾಲಂಕಾರ ಮಾಡಿ ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮ ಸಂಯೋಜಿಸಿದ ವಾಸುದೇವ ಭಟ್ ಪೆರಂಪಳ್ಳಿ ಮಾತನಾಡಿ, ಮುಚ್ಲುಕೋಡು ದೇವಳದ ಆವರಣದಲ್ಲಿ ಶ್ರೀಗಳು ತಮ್ಮ 80ನೇ ಜನ್ಮವರ್ಧಂತಿ ಕಾರ್ಯಕ್ರಮದ ಸಂದರ್ಭ ಸುಬ್ರಹ್ಮಣ್ಯ ಷಷ್ಠಿ ಪರ್ವದಿನ ವಿಶ್ವೇಶತೀರ್ಥ ಮೂಲಿಕಾ ವನ ನಿರ್ಮಾಣಕ್ಕೆ ನಾಗಕೇಸರ ಸಸಿ ನೆಟ್ಟು ಚಾಲನೆ ನೀಡಿದ್ದರು. ಇಲ್ಲಿ ಸುಮಾರು 80 ವಿವಿಧ ವನಸ್ಪತಿಗಳ ಸುಂದರವಾದ ಪುಟ್ಟ ವನ ಬೆಳೆದು ನಿಂತಿದೆ.

ಪರಿಸರ ಪ್ರಕೃತಿಯ ಬಗ್ಗೆ ಅನನ್ಯ ಪ್ರೀತಿ ಹೊಂದಿದ್ದ ಶ್ರೀಗಳ ಸ್ಮರಣಾರ್ಥ ಈ ಸಸಿಗಳನ್ನು ಚೆನ್ನಾಗಿ ಪೋಷಿಸುವ ಸಂಕಲ್ಪ ಮಾಡಲಾಗಿದೆ. ಈ ಕಟ್ಟೆಗಳ ಮೇಲೆ ಶ್ರೀಗಳ ಹೆಸರು ಮತ್ತು ನೆಟ್ಟ ದಿನಾಂಕ ಶಿಲಾಫಲಕದಲ್ಲಿ ನಮೂದಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net