ಯುಸಿಸಿಗೂ ಧರ್ಮಕ್ಕೂ ಸಂಬಂಧವಿಲ್ಲ: ನಂದಕುಮಾರ್​

udp-10-ppc
Published on

ಉಡುಪಿ: ಸಮಾನ ನಾಗರಿಕ ಸಂಹಿತೆ ಮತ್ತು ಯಾವುದೇ ಧರ್ಮಕ್ಕೂ ಸಂಬಂಧವಿಲ್ಲ. ಇದು ಕೌಟುಂಬಿಕ ಸಿವಿಲ್​ ಕಾನೂನು ಆಗಿದ್ದು, ಲಿಂಗ ಸಮಾನತೆ ಮತ್ತು ಮಾನವೀಯತೆ ನೆಲೆಯಲ್ಲಿ ಇದನ್ನು ಪರಿಗಣಿಸಬೇಕು ಎಂದು ಪ್ರಜ್ಞಾ ಪ್ರವಾಹದ ರಾಷ್ಟ್ರೀಯ ಸಂಯೋಜಕ ಜೆ.ನಂದಕುಮಾರ್​ ಹೇಳಿದರು.

ಪೂರ್ಣಪ್ರಜ್ಞ ಸಭಾಂಗಣದಲ್ಲಿ ಶ್ರೀ ಕೃಷ್ಣ ಸೇವಾ ಬಳಗ , ಶ್ರೀ ಅದಮಾರು ಮಠದ ಆಶ್ರಯದಲ್ಲಿ 'ವಿಶ್ವಾರ್ಪಣಂ' ಕಾರ್ಯಕ್ರಮದ ಭಾಗವಾಗಿ ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ಯಾಕೆ ಜಾರಿಯಾಗಬೇಕು?" ಎಂಬ ವಿಚಾರದಲ್ಲಿ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1857ರಲ್ಲಿ ಮತ್ತು ವಂಗಭಂಗ ಚಳುವಳಿಯಲ್ಲಿ ಹಿಂದೂ ಮತ್ತು ಮುಸ್ಲಿಮರ ಐಕ್ಯತೆ ಕಂಡು ಬೆದರಿದ ಬ್ರಿಟನ್​ ಬ್ರೀಟಿಷರ ಡಿವೈಡ್​ ಆ್ಯಂಡ್​ ರೂಲ್​ ಪಾಲಿಸಿ ಜಾರಿಗೊಳಿಸಲು ಶರಿಯಾ ಲಾ ಜಾರಿಗೊಳಿಸಿದ್ದರು. ಯುಸಿಸಿಯಿಂದ ಹಿಂದೂ ಅವಿಭಕ್ತ ಕುಟುಂಬಗಳಿಗೂ ಸ್ವಲ್ಪ ಮಟ್ಟಿನ ತೊಂದರೆಯಾದರೂ ದೇಶಕ್ಕೆ ಒಳ್ಳೆಯದಾಗಲಿ ಎಂಬ ನಿಟ್ಟಿನಲ್ಲಿ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ ಎಂದರು.

ಸಂವಿಧಾನದಲ್ಲೇ ಉಲ್ಲೇಖ
ಸಂವಿಧಾನದ ಅರ್ಟಿಕಲ್​ 44ರಲ್ಲಿ ಸಮಾನ ನಾಗರಿಕ ಸಂಹಿತೆ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ಯಾವ ಸರ್ಕಾರಗಳೂ ಇದನ್ನು ಜಾರಿಗೊಳಿಸಲು ಮುಂದಾಗಿಲ್ಲ. 1937ರವರೆಗೆ ಭಾರತದ ಆನೇಕ ಪ್ರದೇಶಗಳಲ್ಲಿ ಮುಸ್ಲಿಂ ಸಮುದಾಯವೂ ಹಿಂದೂ ಕಾನೂನುಗಳನ್ನು ಪಾಲಿಸುತ್ತಿತ್ತು. ಸಂವಿಧಾನ ಸಭೆಯಲ್ಲಿ ಮಾತನಾಡಿದ್ದ ಡಾ. ಬಿ.ಆರ್​. ಅಂಬೇಡ್ಕರ್​, ಕೇರಳದ ಮೋಪ್ಲಾ ಪ್ರದೇಶ, ಮಧ್ಯಪ್ರದೇಶ, ಅವಧ್​ ಪ್ರಾಂತ್ಯ, ಪಂಜಾಬ್​, ಮೇವಾತ್​ ಮೊದಲಾದ ಕಡೆಗಳಲ್ಲಿ ಮುಸ್ಲಿಮರು ಹಿಂದೂ ಕಾನೂನು ಪಾಲಿಸುತ್ತಿದ್ದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಪಶ್ಚಿಮ ಬಂಗಾಳದ ಕೂಚ್​ ಬಿಹಾರ್​ನಲ್ಲಿ 1980 ಜುಲೈ 1ರವರಗೂ ಸ್ಥಳಿಯ ಮುಸ್ಲಿಮರು ಶರಿಯಾ ಪಾಲಿಸುತ್ತಿರಲಿಲ್ಲ. ನಂತರ ರಾಜ್ಯ ಸರ್ಕಾರ ತುಷ್ಟೀಕರಣಕ್ಕಾಗಿ ಶರಿಯಾ ಕಾನೂನು ಕಡ್ಡಾಯಗೊಳಿಸಿತ್ತು. ಮುಸ್ಲಿಂ ಸಮುದಾಯವನ್ನು ಖುಷಿಪಡಿಸಲು ಶರಿಯಾ ಕಾಯ್ದೆ ತಂದ ಬ್ರೀಟಿಷರು ಶರಿಯಾಕ್ಕೆ ವಿರುದ್ಧವಾಗಿ ಜಿನ್ನಾಗೋಸ್ಕರ ವಿಲ್​ ನೀಡುವ ಅಧಿಕಾರವನ್ನು ಸೇರ್ಪಡೆಗೊಳಿಸಿದ್ದರು ಎಂದು ಹೇಳಿದರು.

ಸ್ವಾತಂತ್ರ ಬಂದದ್ದು ಯಾವಾಗ?
ಸಂಡೇ ಗಾರ್ಡಿಯನ್​ ಪತ್ರಿಕೆ ಮೇ 18, 2014ರಲ್ಲಿ ಬರೆದ ಸಂಪಾದಕೀಯದಲ್ಲಿ ಬ್ರಿಟನ್​ ಕೊನೆಗೂ ಭಾರತ ಬಿಟ್ಟಿತ್ತು ಎಂಬುದಾಗಿ ಬರೆದುಕೊಂಡಿದೆ. ಅಂದರೆ ನರೇಂದ್ರ ಮೋದಿ ಬರುವವರೆಗೂ ಬ್ರಿಟನ್​ ಬೇರೆ ಬೇರೆ ಏಜೆನ್ಸಿಗಳ ಮೂಲಕ ಭಾರತ ಸರ್ಕಾರದ ಮೇಲೆ ಛಾಯಾ ಪ್ರಭಾವ ಹೊಂದಿತ್ತು ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಅದಮಾರು ಮಠ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ವೇದಕಾಲದಿಂದಲೇ ಭಾರತದಲ್ಲಿ ಸಮಾನತೆಗೆ ಒತ್ತು ನೀಡಲಾಗಿದೆ. ದೇಶದಲ್ಲಿ ನೈಜ ಸ್ವಾತಂತ್ರ$್ಯ ಕಳೆದ 9 ವರ್ಷಗಳಿಂದ ಬಂದಿದೆ. ಕ್ರಿಮಿನಲ್​ ಕಾನೂನುಗಳನ್ನು ಒಪ್ಪಿಕೊಂಡಿರುವವರು ಸಮಾನ ಸಿವಿಲ್​ ಕಾನೂನು ವಿರೋಧಿಸುವುದು ಯಾಕೆ. ದೇವಸ್ಥಾನಕ್ಕೆ ಬರುವಾಗ ಜಾತಿ ಅಡ್ಡಬರೋದಿಲ್ಲ. ದೇವರ ಮೇಲೆ ಪ್ರೀತಿಯೇ ಮಾನದಂಡ. ಅದೇ ರೀತಿ ಕಲಿಕೆ ಮತ್ತು ಗಳಿಕೆಯಲ್ಲೂ ಮೆರಿಟ್ಗೆ ಮಾತ್ರ ಆದ್ಯತೆ ಇರಲಿ. ಜಾತಿ ಮಧ್ಯಪ್ರವೇಶ ಮಾಡಬಾರದು. ಇದರಿಂದ ಬೌದ್ಧಿಕ ಶಕ್ತಿ ಭಾರತದಲ್ಲೇ ಉಳಿಯಲಿದೆ ಎಂದು ಹೇಳಿದರು.

ಆದಮಾರು ಮಠ ವ್ಯವಸ್ಥಾಪಕ ಗೋವಿಂದರಾಜ್​ ಸ್ವಾಗತಿಸಿದರು. ಟ್ಯಾಪ್ಮಿ ಸಹ ಪ್ರಾಧ್ಯಾಪಕ ಡಾ. ನಂದನ್​ ಪ್ರಭು ಪ್ರಸ್ತಾವನೆಗೈದರು. ಡಾ. ರಮೇಶ್​ ಭಟ್​ ಕಾರ್ಯಕ್ರಮ ನಿರೂಪಿಸಿದರು. ಸಿಎ ಗಣೇಶ್​ ಹೆಬ್ಬಾರ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net