

ನ್ಯಾಮತಿ: ಧಾರ್ವಿುಕ ಶ್ರದ್ಧೆ ಹಾಗೂ ದೇವರ ಬಗ್ಗೆ ನಂಬಿಕೆ ಇಟ್ಟುಕೊಳ್ಳುವುದು ಮೂಢನಂಬಿಕೆ ಅಲ್ಲ ಎಂದು ಗೋವಿನಕೋವಿ ಶ್ರೀ ಹಾಲಸ್ವಾಮಿ ಮಠದ ವಿಶ್ವಾರಾಧ್ಯ ಮಹಾಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರಾಂಪುರ ಶ್ರೀ ಹಾಲಸ್ವಾಮೀಜಿ ಮಠದ ಮೂಲ ಗುರುಗಳಾದ ಶ್ರೀ ಶಿವಯೋಗಿ ಹಾಲಸಿದ್ದೇಶ್ವರ ಸ್ವಾಮೀಜಿಯ ಗವಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಜಪತಪ, ಮಹಾ ಮೌನಾನುಷ್ಠಾನ ಮಂಗಲ ಹಾಗೂ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ದೇವರಲ್ಲಿ ನಂಬಿಕೆ ಇಟ್ಟ ವ್ಯಕ್ತಿ ಸದಾ ಯಶಸ್ಸಿನ ಮೆಟ್ಟಿಲು ಏರುತ್ತಾನೆ. ಕಾಲ ಬದಲಾಗಬಹುದು, ಆದರೆ ಸತ್ಯ, ಧರ್ಮದ ಶಕ್ತಿ ಎಂದಿಗೂ ಕಡಿಮೆ ಆಗಲು ಸಾಧ್ಯವಿಲ್ಲ, ನಂಬಿಕೆ ಮುಖ್ಯವಾಗಿ ಮನುಷ್ಯನಲ್ಲಿ ಹಲವು ಶಕ್ತಿಗಳನ್ನು ಉಂಟು ಮಾಡಿ, ಆತ್ಮಬಲ ಹೆಚ್ಚು ಮಾಡಿ ಅಸಾಧ್ಯವಾದುದನ್ನು ಸಾಧಿಸಬಹುದಾದ ಆತ್ಮಶಕ್ತಿ ನೀಡುತ್ತದೆ ಎಂದರು.
ಧರ್ಮ ಶ್ರದ್ಧೆಯು ವೈಜ್ಞಾನಿಕತೆಯ ವಿರುದ್ಧವೇನಿಲ್ಲ, ಒಬ್ಬರನ್ನೊಬ್ಬರು ದೂಷಣೆ ಮಾಡುವ ಪರಿಸ್ಥಿತಿಯನ್ನು ಕೆಲವರು ಸೃಷ್ಟಿಸಿದ್ದು ಧರ್ಮದ ಹಾದಿಯಲ್ಲಿ ಕ್ರಮಿಸಿದಾತನ ಬಾಳಿನಲ್ಲಿ ಸುಖ, ಶಾಂತಿ ಲಭಿಸುವುದು ನಿಶ್ಚಿತ. ಧಾರ್ವಿುಕ ನಂಬಿಕೆ ಮೇಲೆ ಮಾನವನ ಬದುಕಿನ ಶ್ರೇಷ್ಠತೆ ಅಡಗಿದೆ ಎಂದು ಹೇಳಿದರು.
ಹಾಲಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎಸ್.ಈ. ರಮೇಶ, ಶಿವಮೂರ್ತಪ್ಪ, ಗಂಗಪ್ಪ, ರಾಜಪ್ಪ , ಸಿದ್ದೇಶ್, ಹಾಲಸ್ವಾಮಿ ಸೇವಾ ಸಮಿತಿ ಪದಾಧಿಕಾರಿಗಳು ಇದ್ದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.