ಅಮಿತ್ ಶಾ ಎದುರು ಎಲ್ಲವನ್ನೂ ಬಹಿರಂಗಪಡಿಸುವೆ: ಬಿಎಸ್‌ವೈಗೆ ವಿಶ್ವನಾಥ್ ಎಚ್ಚರಿಕೆ!

Sha BSY
Published on

ಹುಬ್ಬಳ್ಳಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದ ಬಗೆಗೆ ಪ್ರಶ್ನೆ ಇಲ್ಲ. ಅವರ ನಡವಳಿಕೆ ಬಗೆಗೆ ಪ್ರಶ್ನೆ ಇದೆ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎಚ್. ವಿಶ್ವನಾಥ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳ ಜನರು ಸಿ.ಡಿ. ಇದೆ ಎನ್ನುತ್ತಿದ್ದಾರೆ. ಅದು ಸಿಡಿದಾಗ ಎಲ್ಲವೂ ಗೊತ್ತಾಗುತ್ತದೆ. ಯಡಿಯೂರಪ್ಪ ಅವರ ಪುತ್ರರು, ಪುತ್ರಿಯರು ರಾಜಕಾರಣ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರ ಜೀವ ವಿಜಯೇಂದ್ರನ ಕೈಯಲ್ಲಿದೆ. ನಾನು ಪಕ್ಷಗಳ ಬಗ್ಗೆ ಯಾವತ್ತೂ ಟೀಕಿಸಿಲ್ಲ. ನನ್ನ ದಂಗೆ ಏನಿದ್ದರೂ ನಾಯಕರ ದರ್ಪದ ವಿರುದ್ಧ. ಈಶ್ವರಪ್ಪ ಅವರ ಮನೆಯಲ್ಲೂ ಕುಟುಂಬ ರಾಜಕೀಯವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕುಟುಂಬ ರಾಜಕಾರಣ ಕೊನೆಗಾಣಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಗನ ವಿಷಯದಲ್ಲೂ ಮೋದಿ ಅವರಿಗೆ ಬೇಸರವಿದೆ ಎಂದರು.

ರಮೇಶ ಜಾರಕಿಹೊಳಿ ಅವರು ಸಿ.ಪಿ. ಯೋಗೇಶ್ವರ ಸರ್ಕಾರ ತಂದಿದ್ದಾರೆ ಎನ್ನುತ್ತಿದ್ದಾರೆ. ಯೋಗೇಶ್ವರ ಅವರನ್ನು ಮಂತ್ರಿ ಮಾಡುವ ಅನಿವಾರ್ಯತೆ ಏನಿತ್ತು? ನಾಗೇಶ ಅವರ ಹಕ್ಕು ಕಿತ್ತುಕೊಂಡದ್ದು ಸರಿಯಲ್ಲ. ನಾನು ಅಧಿಕಾರಕ್ಕಾಗಿ ಹಂಬಲಿಸಿದವನಲ್ಲ. ರಾಜಕಾರಣದ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಯಡಿಯೂರಪ್ಪ ಅವರಿಗೆ ಆಸೆ ಇರುವಾಗ ನನಗೇಕೆ ಇರಬಾರದು?. ಅಮಿತ್ ಶಾ ಅವರ ಭೇಟಿಗೆ ಅವಕಾಶ ಕೇಳಿದ್ದೇನೆ. ಕೊಟ್ಟರೆ ಭೇಟಿಯಾಗಿ ಬಹಳ ವಿಸ್ತೃತವಾಗಿ ಎಲ್ಲ ವಿಷಯಗಳನ್ನು ಬಹಿರಂಗಪಡಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net