

ಮೈಸೂರು: ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ನಟ ದರ್ಶನ್ ಕುರಿತು ಮಾತನಾಡಲು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ನಿರಾಕರಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ದರ್ಶನ್ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಲು ಆಸಕ್ತಿ ತೋರಲಿಲ್ಲ. ನಮ್ಮ ನಾಡು ಕಲೆ, ಸಂಸ್ಕೃತಿ, ಸಂಗೀತ, ಸಾಹಿತ್ಯ ಕ್ಷೇತ್ರಕ್ಕೆ ಹೆಸರುವಾಸಿ. ನಮ್ಮ ಕಲಾವಿದರು ವರನಟ ಡಾ.ರಾಜ್‌ಕುಮಾರ್ ಅವರನ್ನು ನೋಡಿಕೊಂಡು ಕಲಿಯಲಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ನಟ ದರ್ಶನ್ ಪ್ರಕರಣ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ. ನಾನು ಮಾತನಾಡಿ ಸಾಕ್ಷಿ ಹೇಳಲು ಪೊಲೀಸರ ಮುಂದೆ ಹೋಗಿ ನಿಲ್ಲಲು ಬಯಸುವುದಿಲ್ಲ. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದರ್ಶನ್ ನನ್ನ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದರು. ಆಗ ದರ್ಶನ್ ತಾಯಿ ಕಾಂಗ್ರೆಸ್‌ನಲ್ಲಿ ಇದ್ದರು. ಹಾಗಾಗಿ ದರ್ಶನ್ ನನ್ನ ಪರವಾಗಿ ಮೈಸೂರಿನಿಂದ ಕೊಡಗಿನವರೆಗೂ ಪ್ರಚಾರ ಮಾಡಿದ್ದರು. ಆ ಸಂದರ್ಭದಲ್ಲಿ ಅವರು ಚೆನ್ನಾಗಿದ್ದರು ಎಂದು ಹೇಳಿದರು.