

ಮೈಸೂರು: ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿದ್ದ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರನ್ನು ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ದೊರೆಯುವ ನಿರೀಕ್ಷೆಯನ್ನು ಎಚ್. ವಿಶ್ವನಾಥ್ ಹೊಂದಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರಿಗೆ ಟಿಕೆಟ್ ನೀಡಿದ್ದು, ಇದರಿಂದ ಎಚ್. ವಿಶ್ವನಾಥ್ ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ.ವೈ. ವಿಜಯೇಂದ್ರ ವಿಶ್ವನಾಥ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಗೆಲ್ಲಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು. ವಿಜಯೇಂದ್ರ ಅವರ ಮನವಿಗೆ ಸ್ಪಂದಿಸಿದ ವಿಶ್ವನಾಥ್ ಈ ಬಾರಿಯ ಚುನಾವಣೆಯಲ್ಲಿ ಯದುವೀರ್ ಗೆಲುವಿಗೆ ಶ್ರಮಿಸ ಲಾಗುವುದು ಎಂದು ಭರವಸೆ ನೀಡಿದ್ದಾರೆ.
ಯದುವೀರ್‌ಗೆ ಜೈ ಅಂದ ವಿಶ್ವನಾಥ್: ರಾಜಪ್ರಭುತ್ವದ ಕುಡಿ ಯದುವೀರ್ ಪ್ರಜಾಪ್ರಭುತ್ವದ ಪ್ರತಿನಿಧಿ ಆಗಲು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ದ್ದಾರೆ. ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು. ಕಾಂಗ್ರೆಸ್‌ಗೆ ಕಾಲ ಇನ್ನೂ ಮಿಂಚಿಲ್ಲ. ಅನ್ನ, ಅಕ್ಷರ, ಆರೋಗ್ಯ ಕೊಟ್ಟ ಯದುವಂಶಕ್ಕೆ ಗೌರವ ಕೊಟ್ಟು ಯದುವೀರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕಾರ ನೀಡಬೇಕು ಎಂದು ಎಚ್. ವಿಶ್ವನಾಥ್ ಮನವಿ ಮಾಡಿದರು.
ಮಹಾರಾಜರು ಜಾತಿ ಮುಂದಿಟ್ಟುಕೊಂಡು ಅಭಿವೃದ್ಧಿ ಮಾಡಿಲ್ಲ. ಯದುವಂಶದವರು ಜಾತಿಯನ್ನು ಮೀರಿದವರು. ಯದುವೀರ್ ಯಾವುದೇ ಪಕ್ಷದಿಂದ ಸ್ಪರ್ಧಿಸಿದ್ದರೂ ನಾನು ಅವರಿಗೆ ಬೆಂಬಲ ನೀಡುತ್ತಿದೆ. ಇದೀಗ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದು, ಅವರಿಗೆ ಬೆಂಬಲ ನೀಡಲಾಗುವುದು ಎಂದು ಹೇಳಿದರು.
ನಾನು ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ನಿಜ. ಆದರೆ, ಇದೀಗ ಮೈಸೂರು ರಾಜಮನೆತನದ ಯದುವೀರ್ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ನಾನು ಸೇರಿದಂತೆ ಎಲ್ಲರು ಅವರನ್ನು ಬೆಂಬಲಿಸಬೇಕು. ಮೈಸೂರು ರಾಜಮನೆತನಕೋಸ್ಕರ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದರು.