

ಮೈಸೂರು: ಅಕ್ಷರಸ್ಥರು ಹಾಗೂ ರಾಜಕಾರಣಿಗಳು ಸಮಾಜಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ರೆಸ್ಪಾನ್ಸಿಬಲ್ ಸಿಟಿಜನ್ಸ್ ವಾಯ್ಸ್ ವತಿಯಿಂದ ನಡೆದ ಸಾಮೂಹಿಕ ಸೌಹಾರ್ದತೆ ಮತ್ತು ಸಹೋದರತ್ವದ ಕಡೆಗೆ ಈದ್ ಮಿಲನ್ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜವನ್ನು ಹಾಳು ಮಾಡುವ ಕೆಲಸ ನಡೆಯುತ್ತಿದ್ದು, ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದೆ. ಇಂತಹ ಸಂದಿಗ್ಥ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಸೋದರತೆ ಮತ್ತು ಭಾತೃತ್ವದ ಅಗತ್ಯವಾಗಿದೆ ಎಂದು ಹೇಳಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಸಮಾಜ ಉಳಿಯಬೇಕಾದರೆ ಎಲ್ಲ ಮನಸ್ಸಿನಲ್ಲಿನ ಕಲ್ಮಶ ದೂರವಾಗಬೇಕು. ನಾವೆಲ್ಲರು ಸೇರಿ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಿಸುವ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಿದೆ ಎಂದರು.
ಶಾಸಕ ಹರೀಶ್ ಗೌಡ, ಮುಸ್ಲಿಂ ಧರ್ಮಗುರುಗಳಾದ ಸರ್‌ಖಾಜಿ ಮೌಲಾನಾ ಉಸ್ಮಾನ್ ಷರೀಫ್, ಮೌಲಾನಾ ಅಬ್ದುಲ್ ಸಲಾಂ ಸಾಬ್, ಪ್ರೊ.ಶಬ್ಬೀರ್ ಮುಸ್ತಾ, ಸಮಾಜವಾದಿ ಸವಿತಾ ಮಲ್ಲೇಶ್, ಸಂಘಟನೆಯ ಕಾರ್ಯದರ್ಶಿ ಎಂ.ಎ. ಕಲೀಂ, ಪತ್ರಕರ್ತ ಬಿ.ಎಂ.ಹನೀಫ್, ಕರ್ನಾಟಕ ಕಾವಲುಪಡೆ ಅಧ್ಯಕ್ಷ ಮೋಹನ್ ಕಮಾರ್ ಗೌಡ ಹಾಗೂ ಇತರರು ಇದ್ದರು.