

ಮೈಸೂರು: ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ‘ನ್ಯಾಯಯೋಧ’ ಬಿರುದು ಘೋಷಣೆ ಮಾಡುವ ಮೂಲ ಸಿದ್ದರಾಮಯ್ಯ ಚಮಚಾಗಿರಿ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಟೀಕಿಸಿದರು.
ಸಿದ್ದರಾಮಯ್ಯ ತಮ್ಮನ್ನು ತಾವೇ ಹಿಂದುಳಿದವರ ಚಾಂಪಿಯನ್ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಅಹಿಂದ ಪ್ರಾರಂಭ ಮಾಡಿದ್ದು ಸಿ.ಎಸ್. ದ್ವಾರಕನಾಥ್ ಮತ್ತು ಆರ್.ಎಲ್. ಜಾಲಪ್ಪ. ಆದರೆ ನೀವು ಮಾಡಿದ್ದು ಏನು? ಕೋಲಾರದಲ್ಲಿ ರಾತ್ರೋ ರಾತ್ರಿ ಜಾಲಪ್ಪ ಫೋಟೋ ತೆಗೆದುಹಾಕಿ ನಿಮ್ಮ ಫೋಟೋ ಹಾಕಿದ್ದು ಯಾರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಸ್ನಿಸಿದರು.
ನಿಜವಾದ ಹಿಂದುಳಿದವರ, ಬಡವರ ನಾಯಕ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್. ಅವರು ಮಾಡಿದ್ದನ್ನು ನಾನು ಮಾಡಿದ್ದು ಎಂದು ಹೇಳಿಕೊಳ್ಳುವ ಚಟ ನಿಮಗೆ. ರಾಹುಲ್ ಗಾಂಧಿಗೆ ನ್ಯಾಯ ಯೋಧ ಅಂತ ಬಿರುದು ನೀಡುವುದಾಗಿ ಗೊತ್ತಾಗಿದೆ. ಅಧಿಕಾರಕ್ಕಾಗಿ ಇಂಥ ಚಮಚಾಗಿರಿ ನಾಚಿಕೆಗೇಡು. ಹೇಳಬೇಕೆಂದರೆ ಇಬ್ಬರೂ ನ್ಯಾಯ ಯೋಧರಲ್ಲ ಎಂದು ಕಿಡಿಕಾರಿದರು.
ಹಿಂದುಳಿದವರಲ್ಲಿ ಕುರುಬ, ಕುಂಬಾರ, ಉಪ್ಪಾರ ಮುಂತಾದ ಐದಾರು ಜಾತಿ ಹೆಸರು ಬಿಟ್ಟು ಬೇರೆ ಜಾತಿ ಹೆಸರೇಳಲಿ ಸಿದ್ದರಾಮಯ್ಯ. ಏಕೆಂದರೆ ಸಿದ್ದರಾಮಯ್ಯ ಕೆಳಗಿರುವ ಜಾತಿಗಳ ಸಂಪರ್ಕವೇ ಇಲ್ಲ. ನೀವು ಹಿಂದುಳಿದ ನಾಯಕರಾಗಿದ್ದರೆ ನಾಲ್ಕು ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ನೀಡಿರುವುದು ಯಾರಿಗೆ? ಈಡಿಗ ಸಮುದಾಯದ ಅಮೀನ್ ಮಟ್ಟು ನಿಮ್ಮ ಭಂಟ, ಮತ್ತೊಬ್ಬರು ಮಾಜಿ ಶಾಸಕರ ಪುತ್ರಿ, ಉಳಿದದ್ದು ದಲಿತರಿಗೆ. ಹಿಂದುಳಿದವರಿಗೆ ಕೊಟ್ಟಿದ್ದು ಏನು ಎಂದು ಪ್ರಶ್ನಿಸಿದರು.
ಸುಮ್ಮನೆ ಬಿಜೆಪಿಯನ್ನು ಹಿಂದುಳಿದ ವರ್ಗಗಳ ವಿರೋಧಿ ಎಂದು ಹೇಳುತ್ತೀರಲ್ಲ. ರಾಜ್ಯಸಭಾ ಸದಸ್ಯ ಸ್ಥಾನವನ್ನು ಸಿದ್ಧಿ ಸಮುದಾಯಕ್ಕೆ ಮತ್ತು ತೀರ ಹಿಂದುಳಿದ ವರ್ಗದ ಅಶೋಕ್ ಗಸ್ತಿಗೆ ನೀಡಲಾಯಿತು. ಆದ್ದರಿಂದ ಮಾತನಾಡುವ ಮುಂಚೆ ನೋಡಿ ಮಾತನಾಡಿ ಎಂದು ಅವರು ತಿರುಗೇಟು ನೀಡಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿಗೊಳಿಸಲು ಸಾಲ ಮಾಡಲಾಗುತ್ತಿದೆ. 7500 ಲಕ್ಷ ಕೋಟಿ ಸಾಲವಾಗಿದೆ. ಮತ್ತೊಂದೆಡೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿಕೊಳ್ಳುವುದಕ್ಕೆ ಅನುದಾನ ಕೋರಿಕೊಂಡು ಕೇಂದ್ರದ ಮುಂದೆ ನೀರಾವರಿ ಸಚಿವರು ನಿಂತಿದ್ದಾರೆ. ಗ್ಯಾರಂಟಿಯಂತ ಯೋಜನೆಯನ್ನು ನಾವು ಸುಭೀಕ್ಷವಾಗಿ ಇದ್ದಾಗ ಮಾಡಬೇಕು. ನೀವು ಹೇಳಿದ ಪಂಚ ಗ್ಯಾರಂಟಿಯಲ್ಲಿ ಯುವನಿಧಿ ಆರಂಭವಾಗಿಯೇ ಇಲ್ಲ? ಬರಿ ಬೊಗಳೆಯೇ ಆಯಿತು. ಯಾವುದಾದರೂ ಚುನಾವಣೆ ಬಂದಾಗ ಹಣ ಕೊಟ್ಟು ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಸ್ವತಃ ಕುರುಬ ಜನಾಂಗದ ರಕ್ಷಣೆಗೆ ಸಿದ್ದರಾಮಯ್ಯಮ ಮುಂದಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಕುರುಬ ಜನಾಂಗದ ಪಾಡು ಹೇಳ ತೀರದು. ಇನ್ನು ಮೆಸೂರಿನಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಿಸಿ ಅರ್ಧಕ್ಕೆ ಬಿಟ್ಟಿದ್ದಾರೆ. ಅದನ್ನೂ ಪೂರ್ಣಗೊಳಿಸಿಲ್ಲ, ಜನ ಧಂಗೆ ಹೇಳುವ ಕಾಲ ಬಂದಿದೆ ಎಂದರು.
ನಿಮಗೆ ತೊಂದರೆ ಎದುರಾದಾಗ ಸಾಧನಾ ಸಮಾವೇಶದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತೀರಿ. ನಿಮ್ಮ ಅವಧಿಯಲ್ಲಿ ಎರಡೂವರೆ ಸಾವಿರ ಸರ್ಕಾರಿ ಶಾಲೆಗೆ ಬೀಗ ಹಾಕಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ರಸ್ತೆ ಗುಂಡಿ ಮುಚ್ಚುತ್ತಿಲ್ಲ, ಇದು ಯಾವ ಸುಭೀಕ್ಷಾ ರಾಜ್ಯ?ಮಾಜಿ ಶಾಸಕ ಸಾ.ರಾ. ಮಹೇಶ್ ಕಾಲದ ರಸ್ತೆ ಕಾಮಗಾರಿಗೆ ಈಗ ಗುದ್ದಲಿ ಹಿಡಿಯುವುದು ಸರಿಯೇ? ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೆ ಸುಮಾರು 1 ಲಕ್ಷ ಮಂದಿ ಸ್ಥಳೀಯ ಪ್ರತಿನಿಧಿಗಳ ಅಧಿಕಾರವನ್ನು ಕಿತ್ತುಕೊಂಡಿದ್ದಾರೆ ಎಂದು ಅವರು ದೂರಿದರು.