

ಮೈಸೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪ್ರತಿ ಬಾರಿ ಟೀಕಿಸುತ್ತಿದ್ದ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಕುರಿತು ಮೃದು ಧೋರಣೆ ಅನುಸರಿಸಿದರು.
ಸಿದ್ದರಾಮಯ್ಯ ವರುಣ ಅಥವಾ ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಜಯಗಳಿಸುತ್ತಾರೆ, ಅದರಲ್ಲಿ ಏನು ವಿಶೇಷ ಏನ ಇಲ್ಲ. ಸಿದ್ದರಾಮಯ್ಯ ಗೆಲ್ಲುತ್ತಾರೆ ಅಂತ ಹೇಳಿದರೆ ತಪ್ಪೇನು ಇಲ್ಲ. ಮಲ್ಲಿಕಾರ್ಜುನ ಖರ್ಗೆ ಹಿರಿಯ ನಾಯಕರು. ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ನನಗೆ ಸ್ನೇಹಿತರು. ಹಾಗೆಂದ ಮಾತ್ರಕ್ಕೆ ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳುವವರಿಗೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.
ಉಪ್ಪಿನ ಮೇಲೆ ತೆರಿಗೆ ವಿಧಿಸುವುದಕ್ಕೆ ಮಹಾತ್ಮ ಗಾಂಧೀಜಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಉಪ್ಪಿಗೂ ಜಿಎಸ್‌ಟಿ ವಿಧಿಸುತ್ತಿರುವುದು ಸರಿಯಲ್ಲ. ಬಡವರಿಗೆ ತೆರಿಗೆ ವಿಧಿಸುವ ಸರ್ಕಾರ ಅದಾನಿ, ಅಂಬಾನಿಗೂ ತೆರಿಗೆ ವಿಧಿಸಬೇಕು. ಆದರೆ, ಅವರೇ ಸರ್ಕಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ತೆರಿಗೆ ಯಾರು ವಿಧಿಸುತ್ತಾರೆ ಎಂದು ಪ್ರಶ್ನಿಸಿದರು.