

ಮಂಡ್ಯ: ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿರುವ ವಿಧಾನಸೌಧದಲ್ಲಿ ಅನುಭವ ಸಿಗುವುದಿಲ್ಲ. ಏಕೆಂದರೆ ಅದು ಈಗ ಮಾಲ್ ಆಗಿದೆ. ಅನುಭವ ಇರುವ ವ್ಯಕ್ತಿಗಳ ಮಾತನ್ನು ಕೇಳುವ ಕಿವಿಗಳು ಸಹ ಅಲ್ಲಿ ಸಿಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಸಿದ್ದ ಮೈಸೂರು ಚಲೋ ಅಥವಾ ಅರಮನೆ ಚಲೋ ಚಳವಳಿ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾಜಿ ಸಚಿವ ಟಿ.ಮರಿಯಪ್ಪ ನೆನಪಿನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕೊಲ್ಲೂರು ಮಲ್ಲಪ್ಪ ಡಿ.ದೇವರಾಜು ಅರಸು ಅವರಿಗೆ ಅವಕಾಶ ಕೊಟ್ಟವರು. ಇಂದಿರಾಗಾಂಧಿ ಅವರು ಮಗುವಾಗಿದ್ದಾಗ ತೊಡೆಮೇಲೆ ಆಡಿಸಿದವರು. ಹೀಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮದೇ ಸಮುದಾಯದ ಕೊಲ್ಲೂರು ಮಲ್ಲಪ್ಪ, ಟಿ.ಮರಿಯಪ್ಪ ಅವರ ಹೆಸರನ್ನು ಇಲ್ಲಿವರೆಗೂ ಹೇಳಿಲ್ಲ. ಏಕೆಂದರೆ ಅವರ ಹೆಸರು ಹೇಳಿದರೆ ಅವರ ಇಮೇಜ್ ಕಡಿಮೆ ಆಗುತ್ತದೆ ಎಂಬುವ ಭಾವನೆಯಿಂದ ಹೇಳುವುದಿಲ್ಲ. ಇದು ನಮ್ಮ ಸಮುದಾಯಕ್ಕೆ ಕೊಡುವ ಬೆಲೆಯೇ ಎಂದು ವ್ಯಂಗ್ಯವಾಡಿದರು.
ಕರ್ನಾಟಕ ಸಂಘ ಒಂದು ಅರಿವಿನ ಮನೆ. ಇಂತಹ ಹಲವು ಸಾಹಿತಿಗಳನ್ನು ಕರೆತಂದು ಜಿಲ್ಲೆಯ ಸಾಂಸ್ಕೃತಿಕ ವ್ಯಕ್ತಿಗಳು ಮರೆಯಾಗುತ್ತಿರುವವರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಅವರ ಸಾಲಿನಲ್ಲಿ ಟಿ.ಮರಿಯಪ್ಪ ಅವರ ಸಾಧನೆ ಕೇಳುತ್ತಿದ್ದರೆ ಮೂಕರಾಗುತ್ತಿದ್ದೇವೆ. ಸಾಧಕರ ಮನೆಗಳನ್ನು ಸಂಗ್ರಹಾಲಯವಾಗಿ ಮಾಡೋಣ ಎಂಬುವ ಮಾತು ಕೇಳಿ ಬಂದಿದೆ ನಾನು ಸಹ ಇದಕ್ಕೆ ಸಹಕರಿಸುವೆ ಎಂದು ಭರವಸೆ ನೀಡಿದ ಅವರು, ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ನಡೆಯುತ್ತಿದೆ. ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಅವರು ಸೌಜನ್ಯಕ್ಕಾದರೂ ನನ್ನ ಸಲಹೆ ಕೇಳಿಲ್ಲ. ಏಕೆಂದರೆ ಎಲ್ಲಿ ನಾನು ಪ್ರಶ್ನೆ ಮಾಡುತ್ತೇನೆಂಬ ಕಾರಣಕ್ಕೆ ಪೋನ್ ಕರೆಯನ್ನೂ ಮಾಡಿಲ್ಲ. ಸರ್ಕಾರದಿಂದ ನಾಮನಿರ್ದೇಶಕನಾಗಿರುವ ನನಗೆ ಮಾಹಿತಿಯೇ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.