ಆಪರೇಷನ್ ಕಮಲ ಪುಸ್ತಕ ಬರೆಯುವೆ; ಮಾಜಿ ಸಚಿವ ಎಚ್.ವಿಶ್ವನಾಥ್ ಹೊಸ ಬಾಂಬ್

VISHWANATHA
H VISHWANATH
Published on

ಮೈಸೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬೀಳಿಸಲು ನಡೆದ ‘ಆಪರೇಷನ್ ಕಮಲ’ ಕುರಿತು ಪುಸ್ತಕ ಬರೆಯುವುದಾಗಿ ಮಾಜಿ ಸಚಿವ ಎಚ್.ವಿಶ್ವನಾಥ್ ತಿಳಿಸಿದ್ದಾರೆ. ಆಪರೇಷನ್ ಕಮಲಕ್ಕೆ ಅಕ್ಷರ ರೂಪ ಕೊಡುತ್ತೇನೆ. ಸಮ್ಮಿಶ್ರ ಸರ್ಕಾರ ಪತನದ ವೇಳೆ ನಡೆದ ಎಲ್ಲ ಬೆಳವಣಿಗೆಗಳನ್ನು ದಾಖಲಿಸುತ್ತೇನೆ.

ಆಪರೇಷನ್ ಕಮಲ ಹಿಮ್ಮೇಳದಲ್ಲಿ ಯಾರ್ಯಾರು ಇದ್ದರು ಎಂಬುದನ್ನು ತಿಳಿಸುತ್ತೇನೆ ಎಂದು ಶುಕ್ರವಾರ ಸುದ್ದಿಗಾರರ ಎದುರು ಹೊಸ ಬಾಂಬ್ ಸಿಡಿಸಿದರು. ರಾಜ್ಯ ರಾಜಕಾರಣದಲ್ಲಿನ ಸಾಫ್ಟ್ ಲೀಡರ್​ಗಳು, ಪ್ರಚಂಡ ಲೀಡರ್​ಗಳು ಅಂದುಕೊಂಡಿರುವವರ ವಿಚಾರವನ್ನು ಹೊರಗೆ ತರುತ್ತೇನೆ. ಜನರಿಗೆ ಸತ್ಯ ತಿಳಿಸಲು ಪುಸ್ತಕ ಬರೆಯಲು ನಿರ್ಧರಿಸಿದ್ದು, ಈ ಸಂಬಂಧ ಎಲ್ಲ ಮಾಹಿತಿ ದಾಖಲಿಸಿದ್ದೇನೆ. ಅದಕ್ಕೆ ಒಂದು ರೂಪ ಕೊಡು ವುದು ಮಾತ್ರ ಬಾಕಿ ಇದೆ ಎಂದರು.

‘ಕೈ’ವಾಡವೂ ಇದೆ!: ಆಪರೇಷನ್ ಕಮಲ ಬೆಳವಣಿಗೆಯಲ್ಲಿ ಬಿಜೆಪಿ ಮಾತ್ರ ಅಲ್ಲ ಕಾಂಗ್ರೆಸ್​ನವರೂ ಇದ್ದಾರೆ. ನಾವು ಮುಂಬೈಗೆ ಹೋಗಿದ್ದು ಸೇರಿ ಪ್ರಕರಣದ ಎಲ್ಲ ವಿಚಾರಗಳನ್ನು ದಾಖಲಿಸುತ್ತೇನೆ. ಆ ಬೆಳವಣಿಗೆಯ ವಿಶ್ಲೇಷಣೆ ಸರಿಯಾಗಿ ಆಗಲಿಲ್ಲ. ಜನರಲ್ಲಿ ಕೌತುಕ ಸಂಶಯಗಳು ಉಳಿದಿವೆ. ಅದು ಮಾರಾಟವಲ್ಲ, ನಮ್ಮ ಹೋರಾಟವಾಗಿತ್ತು.

ಅದನ್ನು ಜನರಿಗೆ ತಿಳಿಸಬೇಕು, ಅದಕ್ಕೆ ಪುಸ್ತಕ ಬರೆಯುತ್ತೇನೆ ಎಂದ ವಿಶ್ವನಾಥ್, ಮಾಜಿ ಸ್ಪೀಕರ್ ರಮೇಶ್​ಕುಮಾರ್ ಕರ್ನಾಟಕಕ್ಕೆ ಮಸಿ ಬಳಿದ ವಿಚಾರ. ಕ್ಲೀನ್, ಸತ್ಯವಂತ, ಸಮರ್ಥ ಅಂದುಕೊಂಡು ಮಾಡಿದ ಅಯೋಗ್ಯ ಕೆಲಸ ತಿಳಿಸುತ್ತೇನೆ. ಇದರ ವಸ್ತುಸ್ಥಿತಿಯನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡುತ್ತೇನೆ ಎಂದು ತಿಳಿಸಿದರು.

ಸಂಪುಟ ವಿಸ್ತರಣೆ ಪ್ರಸಂಗ ಗಮನಿಸಿದರೆ, ಯಾರಿಗೂ ಗೌರವ ಇಲ್ಲದಂತಾಗುತ್ತಿದೆ. ಮಂತ್ರಿ ಆಗದಿದ್ದರೆ ನಾವೇನು ಉಳಿಯುವುದಿಲ್ಲವಾ ಎಂದು ಪ್ರಶ್ನಿಸಿದ ಅವರು, ಕಾಲಘಟ್ಟದಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ರಾಜಕಾರಣದಲ್ಲಿ ಮಾತುಗಳು, ಚರ್ಚೆ, ತೀರ್ಪು ಯಾವಾಗಲೂ ಉಳಿದುಬಿಡುತ್ತವೆ. ಯಡಿಯೂರಪ್ಪರ ಮಾತು ಸದಾ ಉಳಿಯಲಿದೆ ಎಂದರು. ಸೋತವರಿಗೆ ಮಂತ್ರಿ ಮಾಡಬಾರದು ಅಂತ ಹೇಳಿಲ್ಲ.

ಡಾ.ಸುಧಾಕರ್ ಗೊತ್ತಾಗದೆ ಮಾತನಾಡಿದ್ದಾರಷ್ಟೇ. ನಾನು ಬಂದ ಮೇಲೇನೇ ರೂಪ ಬಂದಿದ್ದು, ನಾನು ನಾಯಕತ್ವ ವಹಿಸಿದ ಮೇಲೆ ಒಂದು ಸ್ಥಿತಿಗೆ ಬಂತು. ಸಂಪುಟ ವಿಸ್ತರಣೆ ಆಗಲೇಬೇಕು. ಇಲ್ಲವಾದರೆ ಅಭಿವೃದ್ಧಿ ಕುಂಠಿತವಾಗಲಿದೆ. ರಾಜಕಾರಣದಲ್ಲಿ ಕಾಣುವ ಕೈಗಳಿಗಿಂತ, ಕಾಣದ ಕೈಗಳೇ ಜಾಸ್ತಿ ಕೆಲಸ ಮಾಡುತ್ತವೆ. ಇದನ್ನು ಮೀರಿ ಯಡಿಯೂರಪ್ಪ ನಿರ್ಧಾರ ಕೈಗೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಎಸ್​ವೈ ಮಾತ್ರ ಗೊತ್ತು

ನನಗೆ ಪಕ್ಷವೂ ಗೊತ್ತಿಲ್ಲ. ಹೈಕಮಾಂಡ್ ಸಹ ಗೊತ್ತಿಲ್ಲ. ನನಗೆ ಗೊತ್ತಿರುವುದು ಬಿ.ಎಸ್. ಯಡಿಯೂರಪ್ಪ ಮಾತ್ರ. ಅವರು ಕಾಲದ ಧ್ವನಿಯಾಗಬೇಕು. ವರಿಷ್ಠರ ಧ್ವನಿ ಅಥವಾ ಪಕ್ಷದ ಧ್ವನಿಯಾಗಬಾರದು. ಇಲ್ಲ ಅಂದರೆ ಜನ ಬಿಎಸ್​ವೈ ಅವರನ್ನು ಬೇರೆಯವರಂತೆ ಅಂದುಕೊಳ್ಳುತ್ತಾರೆ. ನನಗೆ ಈಗಲೂ ವಿಶ್ವಾಸವಿದೆ. ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ವಿಶ್ವನಾಥ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net