

ರೋಣ: ವಿಶ್ವಕರ್ಮ ಸಮಾಜವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಒಗ್ಗಟ್ಟಾಗಬೇಕು ಹಾಗೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ರೋಣ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಎ.ಎನ್. ಬಡಿಗೇರ ಹೇಳಿದರು.
ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಸಮುದಾಯ ಭವನದಲ್ಲಿ ಭಾನುವಾರ ತಾಲೂಕು ವಿಶ್ವಕರ್ಮ ಸಮಾಜ, ಶ್ರೀ ಕಾಳಿಕಾದೇವಿ ದೇವಸ್ಥಾನ ಸುಧಾರಣಾ ಸೇವಾ ಸಮಿತಿ, ವಿಶ್ವಕರ್ಮ ಮಹಿಳಾ ಮಂಡಳದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯುತ್ಸವ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದ ಬಿ.ಎನ್. ಬಡಿಗೇರ ಮಾತನಾಡಿ, ವಿಶ್ವಕರ್ಮರು ಅನಾದಿಕಾಲದಿಂದಲು ಗುಡಿ, ಮಂದಿರ, ಮಹಲ್‌ಗಳನ್ನು ನಿರ್ಮಿಸುತ್ತಿದ್ದಾರೆ. ಜಗತ್ತಿಗೆ ಶಿಲ್ಪಕಲೆ ಪರಿಚಯಿಸಿದ ಸಮಾಜವಾಗಿದೆ. ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸುತ್ತಿರುವ ಸಮಾಜವಾಗಿದೆ. ವಿಶ್ವಕರ್ಮ ಸಮಾಜಕ್ಕೆ ಗಟ್ಟಿಧ್ವನಿ ಬರಬೇಕಾದರೆ ಪ್ರತಿ ಕುಟುಂಬದ ಮಕ್ಕಳು ಶಿಕ್ಷಣವಂತರಾಗಬೇಕು. ಆಗ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಳೇಶ ಪೊತದಾರ ಮಾತನಾಡಿದರು. ಸಾನ್ನಿಧ್ಯವನ್ನು ಶ್ರೀಯಚ್ಚರೇಶ್ವರ ಮಹಾಸ್ವಾಮೀಜಿ, ವೈಭವ ಮಹಾಸ್ವಾಮೀಜಿ, ಅಪ್ಪಯ್ಯ ಸ್ವಾಮೀಜಿ, ಯೊಗೇಶ ಕಮ್ಮಾರ, ವಿಷ್ಣು ಕಮ್ಮಾರ, ವಿರುಪಾಕ್ಷ ಪೋತದಾರ, ಮೌನೇಶ್ವರ ಅಕ್ಕಸಾಲಿಗರ, ಭಾಸ್ಕರ ಬಡಿಗೇರ, ಪಾಂಡುರಂಗ ಪತ್ತಾರ, ಸಣ್ಣಮಾನಪ್ಪ ಬಡಿಗೇರ, ಮೌನೇಶ ನಿಂ. ಬಡಿಗೇರ, ಗಂಗಾಧರ ಕಮ್ಮಾರ, ಈಶ್ವರ ಪತ್ತಾರ, ಪ್ರಭುಗೌಡ ಪಾಟೀಲ, ರಾಘವೇಂದ್ರ ಬಡಿಗೇರ ಹಾಜರಿದ್ದರು. ಇದಕ್ಕೂ ಮುನ್ನ ಜಯಂತ್ಯುತ್ಸವ ಮೆರವಣಿಗೆಗೆ ಶಾಸಕ ಜಿ.ಎಸ್. ಪಾಟೀಲ ಚಾಲನೆ ನೀಡಿದರು.