

ಲೋಕಾಪುರ: ವಿಶ್ವಕರ್ಮರು ದೇಶದ ಪ್ರಗತಿಗೆ ಮತ್ತು ಸಮಾಜದ ಅಭ್ಯುದಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಗ್ರಾಮದೇವತೆ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜದ ಅಭಿವೃದ್ಧಿ ಸಂಘದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿಶ್ವಕರ್ಮರು ಎಲ್ಲ ದೇವಸ್ಥಾನಗಳ ಮೂರ್ತಿಗಳನ್ನು ಸೃಷ್ಟಿಸಿದ ಶಿಲ್ಪಿಗಳಾಗಿದ್ದಾರೆ. ಅವರು ನಿಸ್ವಾರ್ಥ ಮನೋಭಾವದ ತ್ಯಾಗಮೂರ್ತಿಗಳು ಎಂದರು.
ಮುರನಾಳದ ಮಳೆ ರಾಜೇಂದ್ರ ಸ್ವಾಮಿಮಠದ ಜಗನ್ನಾಥ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಅನಂತಮಯವಾದ ಸಕಲಕರ್ಮಗಳನ್ನು ಯಾರು ಆಚರಿಸಬಲ್ಲರೋ ಆತನೇ ವಿಶ್ವಕರ್ಮ ಎಂದು ತಿಳಿಸಿದರು.
ವಿಶ್ವಕರ್ಮರ ಭವ್ಯ ಭಾವಚಿತ್ರ ರಥದ ಮೆರವಣಿಗೆ ನಡೆಯಿತು. ವಿಶ್ವಕರ್ಮ ಸಮಾಜದ ಅಧ್ಯಕ್ಷ ವಿ.ಆರ್. ಪತ್ತಾರ ಮತ್ತು ಜಗನ್ನಾಥ ಮಹಾಸ್ವಾಮಿಗಳೂ ರಥದಲ್ಲಿ ಆಸೀನರಾಗಿದ್ದರು. ಸುಮಂಗಲಿಯರ ಕುಂಭಮೇಳ, ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವರು.
ಉದ್ಯಮಿ ಗುರರಾಜ ಉದಪುಡಿ, ಶಿರಸಂಗಿ ದೇವಸ್ಥಾನದ ಅರ್ಚಕ ಇಂದಿರಾಚಾರ್ಯ, ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಸಿದ್ರಾಮಪ್ಪ ಪತ್ತಾರ, ಕಾರ್ಯದರ್ಶಿ ನಾರಾಯಣ ಪತ್ತಾರ, ಮುಖಂಡರಾದ ರವಿ ಪತ್ತಾರ, ದಾನೇಶ ಪತ್ತಾರ, ಚಿದಾನಂದ ಪತ್ತಾರ, ಈಶ್ವರ ಬಡಿಗೇರ, ರಾಜು ಸೊನಾರ, ಶಿವಾನಂದ ಬಡಿಗೇರ, ಈಶ್ವರ ಪತ್ತಾರ, ಮಂಜುನಾಥ ಪತ್ತಾರ, ನಾರಾಯಣ ಪತ್ತಾರ, ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘ ಹಾಗೂ ಗಾಯತ್ರಿ ವಿಶ್ವಕರ್ಮ ಮಹಿಳಾ ಮಂಡಳದ ಸದಸ್ಯರು ಇದ್ದರು.