

ಕುಕನೂರು: ಪುರಾತನ ಕಾಲದಿಂದಲೂ ಕಲೆ ಮತ್ತು ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ ಎಂದು ತಾಪಂ ಮಾಜಿ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ ಹೇಳಿದರು.
ತಾಲೂಕಿನ ಮಂಗಳೂರು ಗ್ರಾಮದ ಶ್ರೀ ಕಾಳಿಕಾದೇವಿ ಬಡಗಿತನ ಕಸುಬುದಾರರ ಕೈಗಾರಿಕಾ ಸಹಕಾರ ಸಂಘದ ಆವರಣದಲ್ಲಿ ತಾಲೂಕು ವಿಶ್ವಕರ್ಮ ಸಮಾಜ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿರಾಟ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುರಾಣಗಳಲ್ಲಿ ಭಗವಾನ್ ವಿಶ್ವಕರ್ಮ ಅವರನ್ನು ಸ್ವರ್ಗ ಮತ್ತು ಭೂಮಿ ಸೃಷ್ಟಿಸಿದ ದೈವಿಕ ವಾಸ್ತುಶಿಲ್ಪಿ ಎಂದು ಪೂಜಿಸಲಾಗುತ್ತದೆ. ದೇವರ ಅರಮನೆ, ದೈವಿಕ ಆಯುಧಗಳು ಮತ್ತು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಅನೇಕ ಮಹತ್ವದ ವಾಸ್ತುಶಿಲ್ಪ ವಿನ್ಯಾಸಗೊಳಿಸಿದ ಕೀರ್ತಿ ವಿಶ್ವಕರ್ಮಗೆ ಸಲ್ಲುತ್ತದೆ ಎಂದು ತಿಳಿಸಿದರು.
ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, ವಿಶ್ವಕರ್ಮ ಸಮಾಜದವರು ಕಾಯಕ ಯೋಗಿಗಳಾಗಿದ್ದು ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಬೆಳೆಯಬೇಕು ಎಂದರು.
ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ, ಮದಾನೆಗುಂದಿ ಸಂಸ್ಥಾನ ಸರಸ್ವತಿ ಪೀಠ ಲೇಬಗೇರಿಯ ಶ್ರೀ ನಾಗಮೂರ್ತೇದ್ರ ಸ್ವಾಮೀಜಿ, ಗಿಣಿಗೇರಾದ ಶ್ರೀ ನಾಗಲಿಂಗ ಸ್ವಾಮೀಜಿ, ನಾಡ ಉಪ ತಹಸೀಲ್ದಾರ್ ಬಸವರಾಜ, ಗ್ರಾಪಂ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರು, ಶಿಕ್ಷಕ ಅಜಯಕುಮಾರ ಜಡಿಯವರ, ಪ್ರಮುಖರಾದ ಪ್ರಕಾಶ ಬಡಿಗೇರ, ಮಾನಮ್ಮ ಕಮ್ಮಾರ, ಡಾ.ಸಿ.ಎಂ.ಹಿರೇಮಠ, ಈರೇಶಪ್ಪ, ರವಿ ಮಳಗಿ, ದೇವೇಂದ್ರಪ್ಪ ಬಡಿಗೇರ, ಅಶೋಕ ಪತ್ತಾರ, ಅಮರೇಶಪ್ಪ ಪತ್ತಾರ, ಗಂಗಾಧರ ಬಡಿಗೇರ, ಶೇಖರಗೌಡ್ರ ಮಾಲಿಪಾಟೀಲ ಇತರರಿದ್ದರು.