ವಿಶ್ವಕರ್ಮ ಯೋಜನೆಯಲ್ಲಿ 25 ಕೋಟಿ ರೂ. ಸಹಾಯಧನ ವಿತರಣೆ

udp-5-vishwakarma
Published on

ಉಡುಪಿ: ಜಿಲ್ಲೆಯಲ್ಲಿ ವಿಶ್ವಕರ್ಮ ಯೋಜನೆಯಲ್ಲಿ 4,942 ಕೇಂದ್ರ ಸರ್ಕಾರದ ಫಲಾನುಭವಿಗಳಿಗೆ ವಿವಿಧ ತರಬೇತಿ ಸಂಸ್ಥೆಗಳಿಂದ ತರಬೇತಿ ಒದಗಿಸುತ್ತಿದ್ದು, ಸುಮಾರು 2,500ಕ್ಕೂ ಮಿಕ್ಕಿ ಲಾನುಭವಿಗಳಿಗೆ ತಲಾ 1 ಲಕ್ಷದಂತೆ ಸುಮಾರು 25 ಕೋಟಿ ರೂ. ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸಂಸದರ ಕಚೇರಿಯಲ್ಲಿ ಇತ್ತೀಚೆಗೆ ನಡೆದ ವಿಶ್ವಕರ್ಮ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. 18 ಸಾಂಪ್ರಾದಾಯಿಕ ಕುಲಕಸುಬುಗಳ ವೃತ್ತಿನಿರತರಿಗೆ ಉತ್ತೇಜನ ನೀಡಿ, ಉಚಿತವಾಗಿ ತರಬೇತಿ ಒದಗಿಸಿ ಸಾಲ ಸೌಲಭ್ಯ ಒದಗಿಸುವ ಯೋಜನೆಗೆ ಕೇಂದ್ರ ಸರ್ಕಾರ 13,000 ಕೋಟಿ ಮೊತ್ತದ ಭದ್ರತೆ ಒದಗಿಸಿದ್ದು, ವಿವಿಧ ಸಾಂಪ್ರಾದಾಯಿಕ ಕುಲಕಸುಬುಗಳ ವೃತ್ತಿನಿರತರಿಗೆ ಉತ್ತಮ ಗುಣಮಟ್ಟದ 15,000 ರೂ. ವೆಚ್ಚದ ಕಿಟ್​ಗಳನ್ನು ಉಚಿತವಾಗಿ ಒದಗಿಸಲಾಗುವುದು. ಸದ್ಯದಲ್ಲಿಯೇ ಸಾಮಾಗ್ರಿಗಳ ಟೆಂಡರ್​ ಅವಧಿ ಕೊನೆಗೊಳ್ಳುತ್ತಿದ್ದು, ಆ ಹಿನ್ನೆಲೆಯಲ್ಲಿ ಕಿಟ್​ಗಳ ವಿತರಣೆಯನ್ನು ಕಾಯದೇ ತರಬೇತಿ ಮತ್ತು ಸಾಲ ಸೌಲಭ್ಯಕ್ಕೆ ವೇಗ ಕೊಡಲು ಅಧಿಕಾರಿಗಳಿಗೆ ಕೋಟ ಸೂಚಿಸಿದರು. ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಟೈಲರಿಂಗ್​, ಗಾರೆ ಕೆಲಸ ಮತ್ತು ಮರಗೆಲಸದ ಫಲಾನುಭವಿಗಳಿಗೆ ಮಂಜೂರಾತಿ ನೀಡಬೇಕೆಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀನಿವಾಸ ರಾವ್​, ಕೈಗಾರಿಕಾ ವಿಸ್ತರಣಾಧಿಕಾರಿ ಸೀ ತಾರಾಮ ಶೆಟ್ಟಿ, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ನಾಗರಾಜ ನಾಯ್ಕ್​, ವಿಶ್ವಕರ್ಮ ಯೋಜನೆಯ ನೋಡಲ್​ ಅಧಿಕಾರಿ ಅರುಣ್​, ವಿಶ್ವಕರ್ಮ ಯೋಜನೆಯ ತಾಂತ್ರಿಕ ಸಹಾಯಕಿ ಸಂಧ್ಯಾ ಮತ್ತು ಲೀಡ್​ ಬ್ಯಾಂಕ್​ ಮ್ಯಾನೇಜರ್​ ಹರೀಶ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net