

ರಬಕವಿ/ಬನಹಟ್ಟಿ: ಗುರು ಶಂಕರಾಚಾರ್ಯರು ಜಗದ್ಗುರು ಎಂದು ಕರೆದಿರುವ ಎಲ್ಲ ಲೋಕಗಳ ಪಿತಾಮಹ ವಿಶ್ವಕರ್ಮರರು ಎಂದು ಹೇಳಲಾಗುತ್ತಿದೆ. ಜಗತ್ತಿನ ಮೊದಲ ಇಂಜಿನಿಯರ್ ವಿಶ್ವಕರ್ಮ. ನಗರಗಳು, ಅರಮನೆ, ರಥಗಳು, ಮಹಲುಗಳು, ಅಸ್ತ್ರಗಳು, ಸಾಧನಗಳು, ಸಲಕರಣೆಗಳು ಸೇರಿ ಈ ಜಗತ್ತಿಗೆ ಬೇಕಾದ ಎಲ್ಲವನ್ನೂ ಸೃಷ್ಟಿಸಿದ್ದು ವಿಶ್ವಕರ್ಮ ಎಂದು ಹನಗಂಡಿ ಗ್ರಾಮದ ವಿಶ್ವಕರ್ಮ ಸಮುದಾಯದ ಮುಖಂಡೆ ಮಾಲಾ ಲಾಳಕಿ ಹೇಳಿದರು.
ತಾಲೂಕಿನ ಹನಗಂಡಿ ಗ್ರಾಮದಲ್ಲಿ ಮಂಗಳವಾರ ಸಂಜೆ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವರ ದೇವನಾದ ಪರಮ ಈಶ್ವರನಾದ ವಿಶ್ವಕರ್ಮನನ್ನು ಸಾಕ್ಷತ್ಕರಿಸಿಕೊಂಡರೆ ಜೀವನವು ದುಃಖಗಳಿಂದ ದೂರವಾಗಿ ಪರಮಾನಂದ ಹೊಂದುತ್ತದೆ. ಕನ್ಯಾಸಂಕ್ರಮಣದಂದು ಭಗವಂತನಾದ ವಿಶ್ವಕರ್ಮೇಶ್ವರನು ಋಷಿಗಳಿಗೆ ದರ್ಶನ ಕೊಟ್ಟಿದ್ದರಿಂದ ಲೋಕಕಲ್ಯಾಣಕ್ಕಾಗಿ ಅವನ ಪೂಜೆ ಮಾಡುವ ರೂಢಿಯಿದೆ. ಅದುವೇ ವಿಶ್ವಕರ್ಮ ಜಯಂತಿ ಎಂದು ತಿಳಿಸಿದರು.
ಮಹಿಳಾ ಮುಖಂಡೆ ಅಂಬಿಕಾ ಯರಕದ ಮಾತನಾಡಿ, ಭಗವಾನ್ ವಿಷ್ಣುವಿಗಾಗಿ ಸುದರ್ಶನ ಚಕ್ರವನ್ನು, ಇಂದ್ರನಿಗಾಗಿ ವಜ್ರಾಯುಧವನ್ನು ನಿರ್ಮಿಸಿಕೊಟ್ಟವನೂ ವಿಶ್ವಕರ್ಮನೇ. ಭೂಲೋಕದ ಜನರ ಕಲ್ಯಾಣಕ್ಕಾಗಿ ವಿಶ್ವಕರ್ಮನು ನೇಗಿಲು ತಯಾರಿಸಿ ರೈತರಿಗೆ ನೀಡಿದನೆಂದು ಪುರಾಣಗಳಲ್ಲಿ ಹೇಳಲಾಗಿದೆ. ಹೀಗಾಗಿ ಇಂದು ನಾವು ಸೇವಿಸುವ ಆಹಾರಕ್ಕೆಲ್ಲಾ ಕಾರಣೀಕರ್ತ ವಿಶ್ವಕರ್ಮನೇ ಎಂದು ಅವರು ತಿಳಿಸಿದರು.
ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಶ್ವಕರ್ಮರ ಭಾವಚಿತ್ರ ಮೆರವಣಿಗೆ ನಡೆಸಿ ಕೊನೆಗೆ ಗ್ರಾಮದ ದೇವಸ್ಥಾನದಲ್ಲಿ ಸಂಪನ್ನಗೊಳಿಸಲಾಯಿತು. ಗ್ರಾಮದಲ್ಲಿ ಅರ್ಧದಷ್ಟು ವಿಶ್ವಕರ್ಮ ಸಮುದಾಯದವರೇ ಇರುವುದರಿಂದ ಎಲ್ಲೆಂದರಲ್ಲಿ ಮೂರ್ತಿ, ಕಲಶ ಸೇರಿ ಇನ್ನಿತರ ಕರಕುಶಲ ವಸ್ತುಗಳನ್ನು ತಯಾರಿಸುವುವರೇ ದೊರೆಯುತ್ತಾರೆ. ಹೀಗಾಗಿ ವಿಶ್ವ ಕರ್ಮರ ಜಯಂತಿಯನ್ನು ಹಬ್ಬದಂತೆ ಆಚರಿಸಲಾಗುತ್ತದೆ.
ವಿದ್ಯಾ ಲಾಳಕಿ, ಕವಿತಾ ಲಾಳಕಿ, ರುಕ್ಮವ್ವ ಬಡಿಗೇರ, ಗೀತಾ ಲಾಳಕಿ, ಸುರೇಖಾ ಲಾಳಕಿ, ರಾಜಶ್ರೀ ಲಾಳಕಿ, ಸುಜಾತಾ ಲಾಳಕಿ ಸೇರಿ ಗ್ರಾಮದ ಅನೇಕ ಹಿರಿಯರು, ಮಕ್ಕಳು ಭಾಗವಹಿಸಿದ್ದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.