

ಮಡಿಕೇರಿ: ವಿಶ್ವಕರ್ಮ ಎಂದರೆ ಸೃಷ್ಟಿಯ ಕರ್ತ. ಸೃಷ್ಟಿಯು ದೇವತೆಯ ಮೂಹರ್ತ ರೂಪವಾಗಿದೆ. ಆ ಹಿನ್ನೆಲೆಯಲ್ಲಿ ವಿಶ್ವಕರ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ನಗರಸಭೆ ಅಧ್ಯಕ್ಷ ಅನಿತಾ ಪೂವಯ್ಯ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಗೂ ಕೊಡಗು ಜಿಲ್ಲಾ ವಿಶ್ವಕರ್ಮ ಒಕ್ಕೂಟ ಸಹಕಾರದಲ್ಲಿ ಮಹದೇವಪೇಟೆಯ ಚೌಡೇಶ್ವರಿ ದೇವಾಲಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದಲ್ಲಿ ಕುಲ ಕಸುಬುಗಳನ್ನು ಗೌರವಿಸಬೇಕು. ಕರಕುಶಲ ಕರ್ಮಿಗಳು ಅನಾದಿಕಾಲದಿಂದಲೂ ಸಮಾಜಕ್ಕೆ ತಮ್ಮದೇ ಆದ ಕೊಡಗೆ ನೀಡಿದ್ದಾರೆ ಎಂದರು.
ಶಿಲ್ಪಿ, ಕಲಾಶ್ರೀ ಪ್ರಶಸ್ತಿ ವಿಜೇತರಾದ ಮಂಜುನಾಥ ಆಚಾರ್ಯ ಮಾತನಾಡಿ, ವಿಶ್ವಕರ್ಮರು ಭಾರತೀಯ ಸಂಸ್ಕೃತಿಯ ಪ್ರತಿಪಾದಕರು ಹಾಗೂ ರಾಯಭಾರಿಗಳು ಎಂದು ಪ್ರತಿಪಾಧಿಸಿ ಅವರು, ವಿಶ್ವಕರ್ಮ ಭಾರತೀಯ ಸಂಸ್ಕೃತಿಯಾಗಿದೆ. ವಿದ್ಯೆಗೆ ಮೀರಿದ ಸಾಧನೆ ಮಾಡಿದ್ದಾರೆ ಎಂದು ಮೆಚ್ವುಗೆ ವ್ಯಕ್ತಪಡಿಸಿದರು.
ಎಲ್ಲಿ ಕ್ರಿಯಾ ಚೈತನ್ಯ ಇರುತ್ತದೆ. ಅಲ್ಲಿ ಕೆಲಸವನ್ನು ಕಾಣಬಹುದು. ಆ ನಿಟ್ಟಿನಲ್ಲಿ ಕಬ್ಬಿಣ, ಮರ, ಚಿನ್ನ, ಹೀಗೆ ಪಂಚ ರೀತಿಯ ಕಾರ್ಯ ಕೈಗೊಂಡು ಕಾಯಕ ವೃತ್ತಿ ಮಾಡುತ್ತಿದ್ದಾರೆ. ವಿಶ್ವಕರ್ಮ ಸಂಸ್ಕೃತಿಯು ಸಮಾಜದಲ್ಲಿ ವಿಶಿಷ್ಟ್ಯತೆಯನ್ನು ಹೊಂದಿದೆ. ವೇದ, ಉಪನಿಷತ್ತುಗಳಲ್ಲಿಯೂ ಸಹ ವಿಶ್ವಕರ್ಮವನ್ನು ಕಾಣಬಹುದಾಗಿದೆ. ಲೋಕ ಕಲ್ಯಾಣಕ್ಕಾಗಿ ವಿಶ್ವಕರ್ಮರು ಶ್ರಮಿಸಿದ್ದಾರೆ ಎಂದು ಹೇಳಿದರು.
ಕೊಡಗು ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಎಸ್.ಜೆ.ದೇವದಾಸ್ ಮಾತನಾಡಿ, ವಿಶ್ವಕರ್ಮ ಸಮಾಜವು ಜಿಲ್ಲೆಯಲ್ಲಿ ೩೦ ರಿಂದ ೪೦ ಸಾವಿರ ಜನಸಂಖ್ಯೆ ಇದೆ. ವಿಶ್ವಕರ್ಮ ಜಯಂತ್ಯುತ್ಸವನ್ನು ಸಮಾಜದವರು ಹಬ್ಬದ ರೀತಿಯಲ್ಲಿ ಆಚರಿಸುತ್ತಾರೆ. ಸರ್ಕಾರ ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ ೧೩ ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಇದೊಂದು ಶ್ಲಾಘನೀಯ ಕಾರ್ಯ ಎಂದರು.
ಮಡಿಕೇರಿ ನಗರ ದಸರಾ ಸಮಿತಿ ನೂತನ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ೨೫ ವರ್ಷಗಳಿಂದ ವಿಶ್ವಕರ್ಮ ಜಯಂತ್ಯುತ್ಸವವನ್ನು ಆಚರಿಸಿಕೊಂಡು ಬರಲಾಗಿದೆ. ಕಳೆದ ೮ ವರ್ಷಗಳಿಂದ ಸರ್ಕಾರದಿಂದ ವಿಶ್ವಕರ್ಮ ಜಯಂತ್ಯುತ್ಸವ ಆಚರಿಸಲಾಗುತ್ತಿದೆ. ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು, ವಿಶ್ವಕರ್ಮ ಸಮಾಜದ ಹೆಸರಿಗೆ ಆರ್‌ಟಿಸಿ ಮಾಡಿಕೊಡಬೇಕಾಗಿ ಜಿಲ್ಲಾಧಿಕಾರಿಗಳಲ್ಲಿ ಕೋರಿದರು.
ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ನಾಮ ನಿರ್ದೇಶಕ ಎಚ್.ಎನ್.ಸುಬ್ರಮಣ್ಯ ಮಾತನಾಡಿ, ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಬಿಡುಗಡೆಯಾಗುವ ಅನುದಾನ ಒದಗಿಸಬೇಕು. ವಿಶ್ವಕರ್ಮ ಸಮಾಜಗಳ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕಿದೆ ಎಂದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲ ಡಾ.ವಿಶಾಲ್ ಮಾತನಾಡಿ, ಅನೇಕರು ಇಂದಿಗೂ ಸಹ ಕುಲ ಕಸುಬುಗಳನ್ನು ಮಾಡುತ್ತಾರೆ. ಕುಲಕಸುಬು ಜತೆಗೆ ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ಕೊಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಭಾರ ಜಿಲ್ಲಾಧಿಕಾರಿ ವರ್ಣಿತ್ ನೇಗಿ, ವಿಶ್ವಕರ್ಮ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷರಾದ ಬಿ.ಜಗದೀಶ್ ಆಚಾರ್ಯ(ಮಡಿಕೇರಿ), ಎಸ್.ಬಿ.ಯಶವಂತ್ ಆಚಾರ್ಯ(ಸೋಮವಾರಪೇಟೆ), ವಿಶ್ವ ಕರ್ಮ ಮಹಿಳಾ ಒಕ್ಕೂಟದ ಅಧ್ಯಕ್ಷ ವಿದ್ಯಾ, ವಿಶ್ವಕರ್ಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜು, ಅಶೋಕ್ ಇತರರು ಇದ್ದರು.