

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬಾಣಾವರ ಪಟ್ಟಣದ ಕೋಟೆ ಬಡಾವಣೆಯ ವಿಶ್ವಕರ್ಮ ವಿಷನ್ ಮತ್ತು ವಿಶ್ವಕರ್ಮ ಮಹಿಳಾ ಸಂಘ ಹಾಗೂ ವಿಶ್ವಕರ್ಮ ಸಮಾಜ ಬಾಂಧವರಿಂದ ವಿಶ್ವಕರ್ಮ ಪೂಜಾ ಮಹೋತ್ಸವವನ್ನು ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿಶ್ವಕರ್ಮ ಪೂಜಾ ಮಹೋತ್ಸವದ ಅಂಗವಾಗಿ ಶ್ರೀ ಕಾಳಿ ಕಮಟೇಶ್ವರಿ ಅಮ್ಮನವರ ಮೂಲ ವಿಗ್ರಹಕ್ಕೆ ಬೆಳಗ್ಗೆ ಪಂಚಾಮೃತ ಅಭಿಷೇಕ ಮಾಡಿ ಮಹಾ ಮಂಗಳಾರತಿಯನ್ನು ನೆರವೇರಿಸಿ ಪ್ರಸಾದ ವಿನಿಯೋಗ ಮಾಡಲಾಯಿತು, ಸಂಜೆ ಶ್ರೀ ಕಾಳಿ ಕಮಟೇಶ್ವರಿ ಅಮ್ಮನವರ ಉತ್ಸವ ಮೂರ್ತಿ,ಶ್ರೀ ವಿರಾಟ್ ವಿಶ್ವಕರ್ಮ ಸ್ವಾಮಿಯವರ ವಿಗ್ರಹಗಳನ್ನು ಪುಷ್ಪಾಲಂಕಾರಗಳನ್ನು ಮಾಡಿದ ರಥದಲ್ಲಿ ಕೂರಿಸಿ ಪಟ್ಟಣದ ರಾಜಬೀದಿಗಳಲ್ಲಿ ನಾದಸ್ವರ ಚಂಡೆ ವಾದ್ಯ ಹಾಗೂ ಗೊಂಬೆ ಕುಣಿತಗಳೊಂದಿಗೆ ಮೆರವಣಿಗೆ ಮಾಡಲಾಯಿತು. ನಂತರ ವಿಶ್ವಕರ್ಮ ಪೂಜಾ ಮಹೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.