

ಮಂಡ್ಯ: ರೈತರೆಂದರೆ ದೇಹದ ಪ್ರಾಣವಿದ್ದಂತೆ, ಪ್ರತಿಯೊಬ್ಬರು ಸೇವಿಸುವ ಆಹಾರದ ಬೆಳೆಯನ್ನು ರೈತರು ಬೆಳೆಯದಿದ್ದರೆ ಏನಾಗುತ್ತದೆಂಬ ಅರಿವು ಹೊಂದುವುದರ ಜತೆಗೆ ಅನ್ನದಾತರ ಬದುಕಿನ ಹಕ್ಕಿಗಾಗಿ ಪ್ರತಿಯೊಬ್ಬರು ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.
ನಗರದ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟದಲ್ಲಿ ಗುರುವಾರ ಭಾಗವಹಿಸಿ ಮಾತನಾಡಿದ ಅವರು, ಕಾವೇರಿ ಹೋರಾಟವನ್ನು ನಾನು ಹಲವಾರು ವರ್ಷಗಳಿಂದ ಕಂಡಿದ್ದೇನೆ. ರೈತರ ಬದುಕಿನ ಅಸ್ವಿತ್ವಕ್ಕಾಗಿ ಕಾವೇರಿ ಹೋರಾಟವನ್ನು ಪ್ರತಿಯೊಬ್ಬರು ಬೆಂಬಲಿಸಬೇಕಿದೆ ಎಂದರು.
ಕಾವೇರಿ ನದಿ ಪಾತ್ರದ ರೈತರ ಕೃಷಿಗೆ ಎಷ್ಟು ನೀರು ಅಗತ್ಯವೋ ಅಷ್ಟೆ ಪ್ರಮಾಣದ ನೀರು ಸಹ ಕುಡಿಯಲು ಅಗತ್ಯವಾಗಿದೆ. ಆದರೆ ಹೋರಾಟ ಮಾತ್ರ ಮಂಡ್ಯದಲ್ಲೇ ಏಕೆ ಆಗಬೇಕು?. ಬೆಂಗಳೂರು ವಾಸಿಗಳಿಗೆ ಕಾವೇರಿ ಹೋರಾಟ ಬೇಡವೇ ಎಂದು ಪ್ರಶ್ನಿಸಿದ ಅವರು, ಮಂಡ್ಯ ರೈತರು ಪ್ರತಿಭಟಿಸದಿದ್ದರೆ ಬೆಂಗಳೂರು ಜನರಿಗೆ ಕುಡಿಯಲು ನೀರು, ಆಹಾರ ಸೇವಿಸಲು ದಿನಸಿ ಖರೀದಿ ಸಾಧ್ಯವಿಲ್ಲ ಎಂಬುವುದನ್ನು ಮನಗೊಂಡು ಹೋರಾಟಕ್ಕೆ ಇಳಿಯಬೇಕು. ಜಾತಿ ಭಾಷೆ ಮೀರಿದ ಹೋರಾಟ ಕಾವೇರಿ ನೀರಿಗಾಗಿ ನಡೆಯಬೇಕು. ರಾಜ್ಯದ ಬಹುಪಾಲು ಜನತೆ ಕಾವೇರಿ ನೀರನ್ನು ಕುಡಿಯುತ್ತಿದ್ದಾರೆ. ಆದರೆ ಹೋರಾಟ ಮಾತ್ರ ಮಂಡ್ಯ ಸೀಮಿತವಾಗಿರುವುದು ಬೇಸರದ ಸಂಗತಿ ಎಂದರು.
ವಿಶ್ವಕರ್ಮ ಸಮುದಾಯ ಕಾಯಕ ಸಮಾಜವಾಗಿದ್ದು, ನಮ್ಮ ಸಮುದಾಯಕ್ಕೆ ಅನ್ನದಾತರೇ ಅವಲಂಬಿತರಾಗಿದ್ದು, ಪ್ರತಿ ಜಿಲ್ಲೆಯ ವಿಶ್ವಕರ್ಮ ಬಂಧುಗಳು ಕಾವೇರಿಗಾಗಿ ಜಾಗೃತಿ ಮೂಡಿಸಲು ಕರೆ ನೀಡಲಾಗುವುದು. ನಮ್ಮ ನದಿ ಪಾತ್ರದ ನೀರನ್ನು ನಮಗೆ ವಂಚಿಸಿ, ಅನ್ಯರಿಗೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಎಲ್ಲ ಸಮಾಜದವರು ಮತ್ತು ಭಾಷಿಕರು, ಕಾವೇರಿಗಾಗಿ ಪ್ರಬಲ ಹೋರಾಟಕ್ಕಾಗಿ ಬೀದಿಗಿಳಿದರೆ ನಮಗೆ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.