

ಕನಕಗಿರಿ: ದೇಶಾದ್ಯಂತ ನಿರ್ಮಾಣವಾಗಿರುವ ದೇವಾಸ್ಥಾನಗಳಲ್ಲಿ ವಿಶ್ವಕರ್ಮರ ಕೈಚಳಕ ಇದೆ. ಆದರೆ, ಆ ಸಮಾಜ ಇಂದು ಬೀದಿಯಲ್ಲಿ ನಿಂತು ಜೀವನಾಧಾರಕ್ಕಾಗಿ ಸರ್ಕಾರವನ್ನು ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಂಎಲ್‌ಸಿ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆ ಅಧ್ಯಕ್ಷ ಕೆ.ಪಿ.ನಂಜುಂಡಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಭೈರಾಪುರದಲ್ಲಿ ಗುರುವಾರ ಸಿಂಧನೂರಿನ ಮಾತೋಶ್ರೀ ಶಿವಶರಣೆ ಪಾರ್ವತಮ್ಮ ಮೌನೇಶ ಆಚಾರಿ ಕೊಂಡಜ್ಜಿ ಅವರಿಂದ ನಿರ್ಮಿಸಲಾದ ಜಗದ್ಗುರು ಆದಿಲಿಂಗೇಶ್ವರ, ಜಗದ್ಗುರು ಮೌನೇಶ್ವರ, ಬಸವಣ್ಣ, ಕಾಳಿಕಾದೇವಿ, ಗಣೇಶ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವಕರ್ಮ ಸಮಾಜ ಆರ್ಥಿಕವಾಗಿ ಹಿಂದುಳಿದಿದ್ದು ಈ ನಿಟ್ಟಿನಲ್ಲಿ ಸಮಾಜವನ್ನು ಸಂಘಟಿಸಬೇಕಾಗಿದೆ. ಒಂದು ಸಮಾಜವನ್ನು ಸಂಘಟನೆ, ಹೋರಾಟದ ಮೂಲಕ ಕಟ್ಟುವುದು ಸುಲಭವಲ್ಲ. ಸಮಾಜಕ್ಕಾಗಿ ಹೋರಾಡುವವರು ಹುಚ್ಚರಿದ್ದಂತೆ. ನನಗೆ 25 ವರ್ಷಗಳಿಂದ ಈ ಹುಚ್ಚು ಹಿಡಿದಿದೆ. ಆದರೆ, ಅದು ನನ್ನ ಸ್ವಾರ್ಥಕ್ಕಲ್ಲ. ನನ್ನ ಸಮಾಜದವರ ಏಳಿಗೆಗಾಗಿ ಎಂದರು.
ಶಿಕ್ಷಕಿಯಾಗಿದ್ದ ಮಾತೋಶ್ರೀ ಪಾರ್ವತೆಮ್ಮ ತಮ್ಮ ನಿವೃತ್ತಿ ಜೀವನದ ಬಳಿಕ ಸಮಾಜಕ್ಕಾಗಿ ದೇವಸ್ಥಾನ ಕಟ್ಟಿಸಿ ಸಮಾಜದವರನ್ನು ಕರೆಸಿರುವುದು ಹೆಮ್ಮೆಯ ವಿಷಯ. ದೇವಸ್ಥಾನಕ್ಕೆ ವೈಯಕ್ತಿಕವಾಗಿ 50 ಸಾವಿರ ರೂ. ಹಾಗೂ ಎಂಎಲ್ಸಿ ಅನುದಾನದಲ್ಲಿ 2 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.
ಇದಕ್ಕೂ ಮೊದಲು ಬುಧವಾರದಂದು ಮಹಿಳೆಯರ ಕುಂಭ ಕಳಸದೊಂದಿಗೆ ನವಲಿ ಗ್ರಾಮದಿಂದ ಭೈರಾಪುರ ಗ್ರಾಮಕ್ಕೆ ಡೊಳ್ಳು ವಾದ್ಯಗಳೊಂದಿಗೆ ಜಗದ್ಗುರು ಮೌನೇಶ್ವರ ಮೂರ್ತಿ ಮೆರವಣಿಗೆ ಮೂಲಕ ತರಲಾಯಿತು. ಲೇಬಗೇರಿಯ ನಾಗಮೂತೇರ್ಂದ್ರ ಸ್ವಾಮೀಜಿ, ಜವಳಗೇರಿಯ ಸೂರ್ಯನಾರಾಯಣ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಲೋಹಿತ್ ವೈ.ಕಲ್ಲೂರು, ಕಾರ್ಯದರ್ಶಿ ಸೋಮನಾಥ ಸುಕಾಲಪೇಟ, ಬ್ರಹ್ಮಗಣೇಶ ವಕೀಲರು, ಮೌನೇಶ ತಿಡಿಗೋಳ ಇತರರಿದ್ದರು.