

ಮಂಡ್ಯ: ವಿಶ್ವಕರ್ಮ ಜಯಂತಿ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಮೆರವಣಿಗೆಗೆ ಡಿಸಿ ಕಚೇರಿ ಎದುರು ಶಾಸಕ ರವಿಕುಮಾರ್ ಗಣಿಗ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಪಂಚಕರ್ಮ ಕೆಲಸ ಮಾಡುವ ವಿಶ್ವಕರ್ಮ ಜನಾಂಗದವರು ರೈತಸ್ನೇಹಿಯಾಗಿದ್ದಾರೆ. ಕೃಷಿಗೆ ಬೇಕಾದ ಸಲಕರಣೆ ಹಾಗೂ ಎಲ್ಲ ರೀತಿಯ ಕೆತ್ತನೆ ಕೆಲಸಗಳನ್ನ ಮಾಡಿ ನೆರವಾಗಿದ್ದಾರೆ. ವಿಶ್ವಕರ್ಮ ಜನಾಂಗದವರು ಇರಲಿಲ್ಲ ಅಂದರೆ ವಿಗ್ರಹ, ಉಳುಮೆ ಮಾಡುವ ಸಲಕರಣೆ ಜನಸಾಮಾನ್ಯರಿಗೆ ಸಿಗುತ್ತಿರಲಿಲ್ಲ. ಸಮುದಾಯದವರ ಭವನ ನಿರ್ಮಾಣಕ್ಕೆ ಸರ್ಕಾರದಿಂದ ನೆರವು ನೀಡಲಾಗುವುದು. ನಿಮ್ಮ ಜತೆ ಸರ್ಕಾರ ಇದೆ ಎಂದು ಭರವಸೆ ನೀಡಿದರು.
ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ತಿರುಮಲಾಚಾರಿ, ಮುಖಂಡರಾದ ರಮೇಶ್, ಸತೀಶ್, ಸುದರ್ಶನ್ ಇತರರಿದ್ದರು. ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಹೊರಟು ಕಾರ್ಮಲಾ ಕಾನ್ವೆಂಟ್ ರಸ್ತೆ ಮೂಲಕ ಆರ್.ಪಿ ರಸ್ತೆ, ನೂರಡಿ ರಸ್ತೆ, ಹೊಸಹಳ್ಳಿ ವೃತ್ತ, ವಿ.ವಿ ರಸ್ತೆಯ ಮೂಲಕ ಕಲಾಮಂದಿರ ತಲುಪಿತು. ವಿವಿಧ ಕಲಾತಂಡಗಳು ಮೆರಗು ನೀಡಿದವು.