ಸಾಂಸ್ಕೃತಿಕವಾಗಿ ದೇಶ ಕಟ್ಟಿದ ವಿಶ್ವಕರ್ಮರು: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿಕೆ

Vishwakarma Jayantyotsava
Published on

ಮಂಡ್ಯ: ಶಿಲೆಗಳನ್ನು ಆಧರಿಸಿ ನೈಪುಣ್ಯಗಾರಿಕೆಯಿಂದ ಆಭರಣ, ಆಯುಧ, ಸೌಧ ಹಾಗೂ ದೇವಾಲಯಗಳನ್ನು ನಿರ್ಮಿಸುತ್ತಾ ದೇಶವನ್ನು ಸಾಂಸ್ಕೃತಿಕವಾಗಿ ಕಟ್ಟಿದವರು ವಿಶ್ವಕರ್ಮರು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಬಣ್ಣಿಸಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ವಿಶ್ವಕರ್ಮ ಸಮಾಜದ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯೋತ್ಸವದಲ್ಲಿ ಮಾತನಾಡಿದ ಅವರು, ವಿಶ್ವಕರ್ಮರು ನಾಗರಿಕತೆಗಿಂತ ಮೊದಲೇ ಕಬ್ಬಿಣ, ಕಟ್ಟಿಗೆ, ಕಂಚು, ತಾಮ್ರ, ಬೆಳ್ಳಿ ಹಾಗೂ ಬಂಗಾರಗಳಲ್ಲಿ ವಿವಿಧ ಶಿಲೋಪಕರಣ ಹಾಗೂ ಆಯುಧಗಳನ್ನು ಮಾಡುತ್ತ ದೇಶಕ್ಕೆ ಸುಂದರ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ ಎಂದರು.

ಜಗತ್ತಿನ ಸೃಷ್ಟಿಯ ಸೃಷ್ಟಿಕರ್ತರಾದ ವಿಶ್ವಕರ್ಮರು ಶ್ರೇಷ್ಠ ಸಂಸ್ಕ್ರತಿ ನಿರ್ಮಾಣದ ಕಾಯಕರಾಗಿದ್ದಾರೆ. ಅವರ ಆರ್ಶೀವಾದದಿಂದ ವಿಶ್ವಕರ್ಮ ಜನಾಂಗದವರು ಕಲೆಯಲ್ಲಿ ನೈಪುಣ್ಯತೆ ಪಡೆದಿದ್ದಾರೆ. ವಿಶ್ವಕರ್ಮ ಕೆತ್ತಿದ ನೇಗಿಲುಗಳಿಂದಲೇ ರೈತಾಪಿ ವರ್ಗ ದೇಶಕ್ಕೆ ಅನ್ನ ನೀಡುತ್ತಿದೆ. ಪ್ರಾಚೀನ ಕಾಲದ ಸಾಮ್ರಾಜ್ಯಗಳ ಇತಿಹಾಸವನ್ನು ಕಲ್ಲಿನಲ್ಲಿ ಕೆತ್ತಿದವರು ಕೂಡ ವಿಶ್ವಕರ್ಮರೇ ಆಗಿದ್ದಾರೆ. ಬೃಹತ್ ಗಾತ್ರದ ಕಲ್ಲುಬಂಡೆಗಳಲ್ಲಿ ದೇವಾಲಯ, ಏಕಶಿಲಾ ಮೂರ್ತಿ ಹಾಗೂ ಕಂಬಗಳ ಶಿಲ್ಪಕಲೆಗಳು ಸೇರಿದಂತೆ ವಾಸ್ತುಶಿಲ್ಪದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ದೇಶದ ಸಣ್ಣ ಸಣ್ಣ ಸಮುದಾಯಗಳು ಸಂಶೋಧನೆಗಳ ಮೂಲಕ ತಮ್ಮ ಇತಿಹಾಸವನ್ನು ಕಂಡುಕೊಳ್ಳುತ್ತಿವೆ. ಇಂತಹ ಸಂಶೋಧನೆಗಳು ಹೆಚ್ಚಾಗಬೇಕು. ದೇಶದಲ್ಲಿ ಹಿಂದುಳಿದ ವರ್ಗದವರ ಪರ್ವಕಾಲ ಪ್ರಾರಂಭವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಶೇಷವಾದ ಸ್ಥಾನಮಾನ ನೀಡಿ ಹಿಂದುಳಿದ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಶ್ರಮಿಸುತ್ತಿವೆ ಎಂದು ತಿಳಿಸಿದರು.

ವಿಶ್ವಕರ್ಮ ಏಕದಂಡಗಿಮಠದ ಮದಾನಾಗುಂದಿ ಸಂಸ್ಥಾನ ಸರಸ್ವತಿ ಪೀಠದ ಕಾಳಹಸ್ತೆಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ವಿಶ್ವಕರ್ಮ ಕುಲಶಾಸ್ತ್ರೀಯ ಅಧ್ಯಯನ ಪೀಠದ ಸದಸ್ಯ ಬಿ.ರಾಮಾಚಾರ್ ವಿಶೇಷ ಉಪನ್ಯಾಸ ನೀಡಿದರು. ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ನಗರಸಭಾ ಸದಸ್ಯ ಕುಮಾರ್, ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಶ್ರೀನಿವಾಸಮೂರ್ತಿ, ಶಂಕರಪ್ರಸಾದ್, ನಾಗರಾಜು ಇತರರಿದ್ದರು. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net