ವಿಶ್ವಕರ್ಮರು ದೇಶದ ಮೊದಲ ಇಂಜಿನಿಯರ್: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

Vishwakarma Jayanti Mandya
Published on
ಮಂಡ್ಯ: ದೇವರಿಗೂ ಮನೆ ನಿರ್ಮಾಣ ಮಾಡಿದ ವಿಶ್ವಕರ್ಮ ಅವರನ್ನು ದೇಶದ ಮೊದಲ ಇಂಜಿನಿಯರ್ ಎನ್ನಬಹುದು ಎಂದು ಶಾಸಕ  ರವಿಕುಮಾರ್ ಗಣಿಗ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವಕರ್ಮದವರು ಇರದಿದ್ದರೆ ವಾಸವಿರಲು ಮನೆಗಳು ಇರುತ್ತಿರಲಿಲ್ಲ. ಅಯೋಧ್ಯೆ, ಕೇದಾರನಾಥದಂತಹ ದೇವಾಲಯಗಳಿಗೆ ಅಡಿಪಾಯ ಹಾಕಿದವರು ಹಾಗೂ ಜಗತ್ತಿನ ಮೊದಲ ದೇವಾಲಯವನ್ನು ನಿರ್ಮಿಸಿದವರು ವಿಶ್ವಕರ್ಮ ಎಂದರು.
ವಿಶ್ವಕರ್ಮದವರು ಇಲ್ಲವೆಂದರೆ ರೈತರಿಗೆ ಉಳಿಮೆ ಮಾಡಲು ನೇಗಿಲು ಇರುವುದಿಲ್ಲ. ವಿಶ್ವಕರ್ಮ ರೈತ ಸ್ನೇಹಿ. ಮದುವೆ ಶುಭ ಸಂದರ್ಭಗಳಲ್ಲಿ ತಾಳಿ ಒಡವೆ ಮಾಡುವಂತಹ ಪೂಣ್ಯದ ಕೆಲಸವನ್ನು ವಿಶ್ವಕರ್ಮ ಸಮುದಾಯದವರು  ಮಾಡಿಕೊಂಡು ಬರುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಸಮುದಾಯದ ಅಭಿವೃದ್ಧಿಗೆ ಸರ್ಕಾರ ಅವರ ಜತೆ ಇದೆ. ಮಂಡ್ಯ ನಗರದಲ್ಲಿ ವಿಶ್ವಕರ್ಮ ಭವನವಿಲ್ಲ‌. ಸುತ್ತಲಿನಲ್ಲಿ ಸರ್ಕಾರಿ ಜಾಗಗಳಿಗೆ ಕೊರತೆ ಇದೆ. ಮುಡಾದಿಂದ ಸೈಟ್ ಖರೀದಿ ಮಾಡಿದರೆ ಸರ್ಕಾರದ ಅನುದಾನದಿಂದ ಸಮುದಾಯ ಭವನ ನಿರ್ಮಾಣ ಮಾಡಬಹುದಾಗಿದೆ. ಸೈಟ್ ಖರೀದಿಸಲು ನಾನು 5 ಲಕ್ಷ ರೂ ನೀಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮದ್ದೂರು ಶಾಸಕ ಕೆ.ಎಂ.ಉದಯ್ ಮಾತನಾಡಿ, ಸಮಾಜಕ್ಕೆ  ವಿಶ್ವಕರ್ಮ ಸಮುದಾಯದವರು ಅನೇಕ ಕೊಡುಗೆ ನೀಡಿದ್ದಾರೆ. ಆಧುನೀಕರಣದಲ್ಲಿ ಅನೇಕ ತಾಂತ್ರಿಕ ಮಾರ್ಪಾಡುಗಳು ಉಂಟಾಗಿವೆ. ಆದರೆ ಈಗಲೂ ಕೌಶಲಯುತವಾದ ಕಸುಬಿನೊಂದಿಗೆ ಸಮಾಜಕ್ಕೆ  ವಿಶ್ವಕರ್ಮ ಸಮುದಾಯದವರು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಮದ್ದೂರಿನಲ್ಲಿ ವಿಶ್ವಕರ್ಮ ಸಮುದಾಯದವರಿಗೆ ನಿವೇಶನ ನೀಡುವ ಸಲುವಾಗಿ ಸರ್ವೇ ಕೆಲಸ ನಡೆಸಲಾಗುತ್ತಿದೆ. ಶೀಘ್ರದಲ್ಲೇ ನಿವೇಶನ ಕೊಡಿಸಲಾಗುವುದು. ಒಂದು ರಸ್ತೆ ವೃತ್ತದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಅವರು ಪ್ರತಿಮೆ ನಿರ್ಮಾಣ ಮಾಡಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ವಿಶ್ವಕರ್ಮ ಭವನ ನಿರ್ಮಾಣಕ್ಕೆ ಸೈಟ್ ಖರೀದಿಸಲು ಶಾಸಕರು ಸಹಕರ ನೀಡುವುದಾಗಿ ಭರವಸೆ ನೀಡಿದ್ದಾರೆ. ನೀವು ಸಹ ಸಮುದಾಯದವರ ಬಳಿ ಹಣ ಸಂಗ್ರಹಣೆ ಮಾಡಿದರೆ ಮುಡಾದಲ್ಲಿ ಸೈಟ್ ಖರೀದಿಸಲು ಕ್ರಮ ವಹಿಸಬಹುದು ಎಂದು ತಿಳಿಸಿದರು.
ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಶ್ರೀನಿವಾಸನ್ ನರಸಿಂಹಸ್ವಾಮಿ ಗುರೂಜಿ, ನಗರಸಭೆ ಅಧ್ಯಕ್ಷ ನಾಗೇಶ್, ಚಲನಚಿತ್ರ ನಟ ಮದನ್ ಕುಮಾರ್, ಜಿಲ್ಲಾ ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಸುದರ್ಶನ್, ನಗರಸಭೆ ಸದಸ್ಯರಾದ ಶ್ರೀಧರ್, ಶಿವಪ್ರಕಾಶ್, ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಸಂದೇಶ್ ಇತರರಿದ್ದರು.
ಇದೇ ವೇಳೆ ವಿಶ್ವಕರ್ಮ ಸಮುದಾಯದಲ್ಲಿ ಸಾಧನೆ ಮಾಡಿದ ಹತ್ತು ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ‌ ಮುನ್ನ ಜಿಲ್ಲಾಧಿಕಾರಿ ಕಚೇರಿಯಿಂದ ಕಲಾಮಂದಿರದವರೆಗೆ ಮೆರವಣಿಗೆ ನಡೆಯಿತು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net