ವಿಶ್ವಕರ್ಮ ಜಯಂತಿ ಒಂದು ಸಮುದಾಯಕ್ಕೆ ಸೀಮಿತವಲ್ಲ

byn (2)
Published on

ಬೈಂದೂರು: ವಿಶ್ವಕರ್ಮ ಜಯಂತಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಇಡೀ ವಿಶ್ವಕ್ಕೆ ಗುರುವಾದ ಸೃಷ್ಟಿಕರ್ತ ಬ್ರಹ್ಮನಿಗೆ ಸಕಲ ಸೌಲಭ್ಯಗಳನ್ನು ಒದಗಿಸಿದ ಗುರು ವಿಶ್ವಕರ್ಮ. ಅವರ ಮಹತ್ವವನ್ನು ಎಲ್ಲರೂ ಅರಿಯಬೇಕು ಎಂದು ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಕಳಿ ಚಂದ್ರಯ್ಯ ಆಚಾರ್ಯ ಹೇಳಿದರು.

ಬೈಂದೂರು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ವತಿಯಿಂದ ಬುಧವಾರ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ರಾಮಚಂದ್ರಪ್ಪ ಮಾತನಾಡಿ, ಭಗವಾನ್ ವಿಶ್ವಕರ್ಮನನ್ನು ಬ್ರಹ್ಮಾಂಡದ ಮೊದಲ ವಾಸ್ತುಶಿಲ್ಪಿ, ಕುಶಲಕರ್ಮಿ ಮತ್ತು ಇಂಜಿನಿಯರ್ ಎಂದು ಪರಿಗಣಿಸಲಾಗಿದೆ. ಈ ದಿನದಂದು ವಿಶ್ವಕರ್ಮ ದೇವರನ್ನು ಪೂಜಿಸುವುದರಿಂದ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ ಎಂದರು.

ನಿವೃತ್ತ ಶಿಕ್ಷಕ ಕೆ.ಸಂಜೀವ ಆಚಾರ್ಯ ಕಳವಾಡಿ, ಹಿರಿಯ ಕಾಷ್ಠಶಿಲ್ಪಿ ಸಂಸಾಡಿ ನಾರಾಯಣ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಉಪ್ರಳ್ಳಿ ಕಾಳಿಕಾಂಬಾ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್, ಬೈಂದೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ಆಚಾರ್ಯ ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ ಸ್ವಾಗತಿಸಿದರು. ಉಪ್ರಳ್ಳಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಆಚಾರ್ಯ ಕೊಡ್ಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ್ ಆಚಾರ್ಯ ಬಿಜೂರು ಕಾರ್ಯಕ್ರಮ ನಿರೂಪಿಸಿದರು. ಸದಾನಂದ ಆಚಾರ್ಯ ತಲ್ಲೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net